ADVERTISEMENT

ಕೋವಿಡ್-19 ಉಚಿತ ಪರೀಕ್ಷೆಗೆ ‘ಸುಪ್ರೀಂ ಕೋರ್ಟ್’ ಸೂಚನೆ

ಖಾಸಗಿ ಪ್ರಯೋಗಾಲಯಗಳಿಗೆ ನಿರ್ದೇಶನ ನೀಡಲು ಕೇಂದ್ರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 20:15 IST
Last Updated 8 ಏಪ್ರಿಲ್ 2020, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಇರುವುದನ್ನು ದೃಢಪಡಿಸಲು ನಡೆಸುವ ಪರೀಕ್ಷೆಯನ್ನು ಖಾಸಗಿ ಪ್ರಯೋಗಾಲಯಗಳು ಉಚಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.

‘ಪರೀಕ್ಷೆ ನಡೆಸಲು ಖಾಸಗಿ ಪ್ರಯೋಗಾಲಯಗಳು ₹4500 ಅನ್ನುತೆಗೆದುಕೊಳ್ಳಬಾರದು. ಈ ಸಂಕಷ್ಟದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ಮಹತ್ವದ ಜವಾಬ್ದಾರಿ ಇದೆ. ರಾಷ್ಟ್ರವು ಬಿಕ್ಕಟ್ಟು ಎದುರಿಸುತ್ತಿರುವಾಗ ಸಮಾಜ ಸೇವೆಯೇ ಮುಖ್ಯ ಧ್ಯೇಯ’ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಹೇಳಿದೆ.

‘ಎನ್‌ಎಬಿಎಲ್‌’ ಮಾನ್ಯತೆ ಹೊಂದಿರುವ ಪ್ರಯೋಗಾಲಯಗಳಲ್ಲಿ ಅಥವಾ ‘ಐಸಿಎಂಆರ್‌’ನಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪರೀಕ್ಷೆ ಕೈಗೊಳ್ಳುವಂತೆ ಸೂಚಿಸಿದೆ.

ADVERTISEMENT

ಈ ಬಗ್ಗೆ ನಿಗಾ ವಹಿಸಲು ವ್ಯವಸ್ಥೆಯೊಂದನ್ನು ರೂಪಿಸಬೇಕು. ಖಾಸಗಿ ಲ್ಯಾಬ್‌ಗಳು ಆಕರಿಸುವ ಶುಲ್ಕವನ್ನು ಜನರಿಗೆ ಮರುಪಾವತಿ ಮಾಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ರೋಗ ಪತ್ತೆ ಪರೀಕ್ಷೆ ಸೌಲಭ್ಯವನ್ನು ಉಚಿತವಾಗಿ ಒದಗಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಶಶಾಂಕದೇವ್‌ ಸುಧಿ ಎಂಬುವವರು ಅರ್ಜಿ ಸಲ್ಲಿಸಿದ್ದರು.

‘ಪರೀಕ್ಷೆಗೆ ದುಬಾರಿ ಶುಲ್ಕ ನೀಡಬೇಕಾಗುತ್ತದೆ. ಹೀಗಾಗಿ ಉಚಿತವಾಗಿಯೇ ಪರೀಕ್ಷೆ ನಡೆಸಬೇಕು’ ಎಂದೂ ಅರ್ಜಿದಾರ ಸುಧಿ ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.