ADVERTISEMENT

ಒಂದೇ ಕಾಲಲ್ಲಿ ಬಂಗಾಳ ಮತ್ತು ಎರಡೂ ಕಾಲಲ್ಲಿ ದೆಹಲಿಯಲ್ಲಿ ಗೆಲ್ಲುವೆ: ಮಮತಾ

ಪಿಟಿಐ
Published 5 ಏಪ್ರಿಲ್ 2021, 14:03 IST
Last Updated 5 ಏಪ್ರಿಲ್ 2021, 14:03 IST
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಚುಂಚುರಾ: ತನಗಾಗಿರುವ ಗಾಯದ ಹೊರತಾಗಿಯೂ ಸದ್ಯ ನಡೆಯುತ್ತಿರುವ ರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಮತ್ತು ಅಂತಿಮವಾಗಿ ದೆಹಲಿಯಲ್ಲಿಯೂ ಅಧಿಕಾರ ಹಿಡಿಯುವುದೇ ನಮ್ಮ ಗುರಿಯಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದರು.

ಮೂರನೇ ಅವಧಿಗೆ ಅಧಿಕಾರ ಹಿಡಿಯಲು ಕಾಯುತ್ತಿರುವ ಮಮತಾ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಸಾ ವಿರುದ್ಧ ವಾಗ್ದಾಳಿ ನಡೆಸಿದರು. ತನ್ನನ್ನು ರಾಯಲ್ ಬಂಗಾಳದ ಹುಲಿ ಎಂದು ಹೇಳಿಕೊಂಡ ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳವನ್ನು ಗುಜರಾತ್‌ನ ಯಾರೊಬ್ಬರೂ ಆಳಲಾಗುವುದಿಲ್ಲ. ಪಶ್ಚಿಮ ಬಂಗಾಳವನ್ನು ತನ್ನದೇ ಜನರು ಆಳುತ್ತಾರೆ ಎಂದು ಹೇಳಿದರು.

ನಾನು ಒಂದು ಕಾಲಿನಿಂದ ಪಶ್ಚಿಮ ಬಂಗಾಳವನ್ನು ಮತ್ತು ಎರಡು ಕಾಲುಗಳಿಂದ ದೆಹಲಿಯನ್ನು ಗೆಲ್ಲುತ್ತೇನೆ ಎಂದು ಮಮತಾ ತಿಳಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡುವುದನ್ನು ತಡೆಯಲು ಮಾರ್ಚ್ 10 ರಂದು ನಂದಿಗ್ರಾಮದಲ್ಲಿ ಬಿಜೆಪಿ ಬೆಂಬಲಿಗರು ಮಮತಾರನ್ನು ತಳ್ಳಿದ್ದರು ಎಂದು ಟಿಎಂಸಿ ಮುಖಂಡರು ಹೇಳಿದ್ದು, ಇದು ಟಿಎಂಸಿ ಮತ್ತು ಬಿಜೆಪಿ ನಾಯಕರ ನಡುವಿನ ಕೆಸರೆರೆಚಾಟಕ್ಕೆ ಕಾರಣವಾಗಿತ್ತು. ಆದರೆ, ಚುನಾವಣಾ ವೀಕ್ಷಕರ ವರದಿಯನ್ನು ಪರಿಶೀಲಿಸಿದ ಚುನಾವಣಾ ಆಯೋಗ, ನಂದಿಗ್ರಾಮದಲ್ಲಿ ನಡೆದ ಘಟನೆ ಆಕಸ್ಮಿಕ ಮತ್ತು ಅದೊಂದು ಯೋಜಿತ ದಾಳಿಯಲ್ಲ ಎಂದು ಹೇಳಿತ್ತು.

ಛತ್ತೀಸಗಡದಲ್ಲಿ ಭಾನುವಾರ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ 22 ಭದ್ರತಾ ಸಿಬ್ಬಂದಿಯ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಮಮತಾ, ಪಶ್ಚಿಮ ಬಂಗಾಳದ ಚುನಾವಣೆಯತ್ತ ಗಮನ ಹರಿಸಿರುವ ಪರಿಣಾಮ ಬಿಜೆಪಿಯು ದೇಶವನ್ನು ಸರಿಯಾಗಿ ಆಳುತ್ತಿಲ್ಲ ಎಂದು ದೂರಿದ್ದಾರೆ.

ಚುಂಚುರಾ ವಿಧಾನಸಭಾ ಕ್ಷೇತ್ರಕ್ಕೆ ಹೂಗ್ಲಿಯ ಲೋಕಸಭಾ ಸಂಸದೆ ಲಾಕೆಟ್ ಚಟರ್ಜಿ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ನಡೆಯನ್ನು ಟೀಕಿಸಿದ ಬ್ಯಾನರ್ಜಿ, ರಾಜ್ಯ ಚುನಾವಣೆಯಲ್ಲಿ ಗೆಲ್ಲಲು ದೇಶದಾದ್ಯಂತ ನಾಯಕರನ್ನು ಕರೆತಂದು ಚುನಾವಣಾ ಪ್ರಚಾರ ಮಾಡುತ್ತಿರುವ ಬಿಜೆಪಿ, ಸೂಕ್ತ ಅಭ್ಯರ್ಥಿಗಳ ಕೊರತೆಯಿಂದಾಗಿ ಸಂಸದರನ್ನೇ ಅಭ್ಯರ್ಥಿಗಳನ್ನಾಗಿ ಚುನಾವಣೆಗೆ ಕಣಕ್ಕಿಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಚುನಾವಣೆಗೆ ಮುನ್ನ ವಿವಿಧ ಸಂದರ್ಭಗಳಲ್ಲಿ ಪ್ರಧಾನ ಮಂತ್ರಿಯವರು ತಮ್ಮ ಮೇಲೆ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ಬ್ಯಾನರ್ಜಿ, ಮೋದಿಯವರು ತಮ್ಮನ್ನು 'ದೀದಿ..ಒ... ದೀದಿ' ಎಂದು ಕರೆಯುವ ಬಗ್ಗೆ ನಾನು ಹೆದರುವುದಿಲ್ಲ. 'ಅವರು ಇದನ್ನು ಪ್ರತಿದಿನ ಮಾಡುತ್ತಾರೆ, ಆದರೆ ನಾನು ಹೆದರುವುದಿಲ್ಲ' ಎಂದು ಬ್ಯಾನರ್ಜಿ ಹೇಳಿದರು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಡೆಸುವ ಹಿಂದಿನ ತರ್ಕವನ್ನು ಪ್ರಶ್ನಿಸಿದ ಅವರು, 'ಇದನ್ನು 3 ಅಥವಾ 4 ಹಂತಗಳಲ್ಲಿ ಮಾಡಬಹುದಿತ್ತು'. ಚುನಾವಣೆಯನ್ನು ಕಡಿಮೆ ಹಂತಗಳಲ್ಲಿ ನಡೆಸುವುದು ಮತ್ತು ಕೋವಿಡ್ ದೃಷ್ಟಿಯಿಂದ ವಿವೇಕಯುತವಲ್ಲವೇ?. ರಾಜ್ಯದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಕಠೋರವಾಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.