ADVERTISEMENT

ಯುವ ಕಾಂಗ್ರೆಸ್‌ ಚುನಾವಣೆ ಫಲಿತಾಂಶ ಗೊಂದಲ: ದೆಹಲಿಗೆ ರಕ್ಷಾ ರಾಮಯ್ಯ

ಯುವ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಯಲ್ಲಿ ಮತಗಳ ಅಳಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:48 IST
Last Updated 9 ಫೆಬ್ರುವರಿ 2021, 19:48 IST
ರಕ್ಷಾ ರಾಮಯ್ಯ
ರಕ್ಷಾ ರಾಮಯ್ಯ   

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆ ಫಲಿತಾಂಶದ ಕುರಿತ ಗೊಂದಲಗಳನ್ನು ಪರಿಹರಿಸುವಂತೆ ಮುಖ್ಯ ಚುನಾವಣಾಧಿಕಾರಿಯಾಗಿದ್ದ ರಾಜ್‌ಪಾಲ್‌ ಬಿಸ್ಟ ಅವರನ್ನು ಒತ್ತಾಯಿಸಲು ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮಂಗಳವಾರ ದೆಹಲಿಗೆ ತೆರಳಿದ್ದಾರೆ.

‘ಫೇಮ್‌’ ಸಂಸ್ಥೆ ಆನ್‌ಲೈನ್‌ ಮೂಲಕ ಚುನಾವಣೆ ನಡೆಸಿತ್ತು. ಜ. 31 ಫಲಿತಾಶ ಪ್ರಕಟಿಸಿದಾಗ 16 ಸಾವಿರ ಮತಗಳನ್ನು ಡಿಲೀಟ್ ಮಾಡಲಾಗಿದೆ. ಫೆ. 4ರಂದು ಪರಿಷ್ಕೃತ ಫಲಿತಾಂಶ ಪ್ರಕಟಿಸಿದ್ದು, ಈ ವೇಳೆ 27 ಸಾವಿರ ಮತಗಳನ್ನು ಡಿಲೀಟ್‌ ಮಾಡಲಾಗಿದೆ. ‘ಸೆಲ್ಫಿ ತೆಗೆದು ಮತ ಚಲಾಯಿಸಬೇಕಿದ್ದು, ಈ ವೇಳೆ ಲೋಪಗಳಾಗಿವೆ’ ಎಂಬ ಕಾರಣ ನೀಡಿ ‘ಫೇಮ್‌’ ಸಂಸ್ಥೆ ಡಿಲೀಟ್‌ ಮಾಡಿದೆ ಎನ್ನಲಾಗಿದೆ.

‘ಮೊದಲು ಫಲಿತಾಂಶ ಪ್ರಕಟಿಸಿದಾಗ ಬ್ಲಾಕ್‌ ಅಧ್ಯಕ್ಷರಾಗಿ ಚುನಾಯಿತರಾಗಿದ್ದ 120ಕ್ಕೂ ಹೆಚ್ಚು ಮಂದಿ,ಎರಡನೇ ಭಾರಿ ಫಲಿತಾಂಶ ಪ್ರಕಟಿಸಿದಾಗ ಪರಾಭವಗೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಕೆಲವರು, ನ್ಯಾಯ ಒದಗಿಸುವಂತೆ ಒತ್ತಡ ಹೇರಿದ್ದಾರೆ. ಈ ಗೊಂದಲದ ಬಗ್ಗೆ ವರಿಷ್ಠರ ಜೊತೆ ಚರ್ಚಿಸಲು ರಕ್ಷಾ ರಾಮಯ್ಯ ದೆಹಲಿಗೆ ತೆರಳಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು
ಹೇಳಿವೆ.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ರಕ್ಷಾ ರಾಮಯ್ಯ, ಮೊಹಮ್ಮದ್ ನಲಪಾಡ್‌ ಮತ್ತು ಎಚ್‌.ಎಸ್‌. ಮಂಜುನಾಥ್‌ ನಡುವೆ ಪೈಪೋಟಿ ಇತ್ತು. ಮತ ಎಣಿಕೆಯಲ್ಲಿ ಮೊಹಮ್ಮದ್ ನಲಪಾಡ್‌ ಹೆಚ್ಚು ಮತಗಳನ್ನು ಪಡೆದಿದ್ದರೂ ಅವರನ್ನು ಅನರ್ಹಗೊಳಿಸಲಾಗಿದೆ. ಹೀಗಾಗಿ, ಎರಡನೇ ಅತಿ ಹೆಚ್ಚು ಮತಗಳನ್ನು ಗಳಿಸಿದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಪ್ರಕಟಿಸಿತ್ತು.

‘ಜ. 31ರಂದು ಒಟ್ಟು 470 ಬ್ಲಾಕ್ ಘಟಕಗಳ ಫಲಿತಾಂಶದಲ್ಲಿ 270ರಲ್ಲಿ ರಕ್ಷಾ ರಾಮಯ್ಯ ಬೆಂಬಲಿಗರು ಗೆದ್ದಿದ್ದರು. ಆದರೆ, ಫೆ. 4ರಂದು ಪ್ರಕಟವಾದ ಫಲಿತಾಂಶದಲ್ಲಿ ಈ ಪೈಕಿ 120 ಘಟಕಗಳ ಅಧ್ಯಕ್ಷರು ಪರಾಭವಗೊಂಡಿದ್ದಾರೆ. ಅವರಿಗೆ ಬಂದಿದ್ದ ಮತಗಳನ್ನು ಡಿಲೀಟ್ ಮಾಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಮತಗಳು ಡಿಲೀಟ್ ಆಗಲು ಕಾರಣವೇನು ಎನ್ನುವುದನ್ನು ಪತ್ತೆ ಮಾಡಿ ವಾಸ್ತವ ಸಂಗತಿ ಬಹಿರಂಗಪಡಿಸಬೇಕು’ ಎಂದು ರಕ್ಷಾ ರಾಮಯ್ಯ ಬೆಂಬಲಿಗರು
ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.