ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ಚಂಡೀಗಢ: ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯಡಿ ಸೇರಿಸಿ, ಅಲ್ಲಿಗೆ ರಾಷ್ಟ್ರಪತಿಯವರ ಮೂಲಕ ಪ್ರತ್ಯೇಕ ಆಡಳಿತಾಧಿಕಾರಿಯನ್ನು ನೇಮಿಸುವ ಮಸೂದೆ ಜಾರಿಗೆ ತರುವ ಎನ್‌ಡಿಎ ಪ್ರಸ್ತಾವಕ್ಕೆ ಆಡಳಿತಾರೂಢ ಎಎಪಿ, ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಚಂಡೀಗಢ ರಾಜಧಾನಿಯಾಗಿದೆ. ‘ಪಂಜಾಬ್‌ನ ಅವಿಭಾಜ್ಯ ಅಂಗವಾದ ಚಂಡೀಗಢವನ್ನು ಕಿತ್ತು ಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ’ ವಿರೋಧ ಪಕ್ಷಗಳು ಆರೋಪಿಸಿವೆ.
ಡಿಸೆಂಬರ್ 1ರಿಂದ ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರವು ಸಂವಿಧಾನದ (131ನೇ ತಿದ್ದುಪಡಿ) ಮಸೂದೆ –2025 ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಲೋಕಸಭೆ ಮತ್ತು ರಾಜ್ಯಸಭೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಚಂಡೀಗಢದಲ್ಲಿ ಪಂಜಾಬ್ ರಾಜ್ಯಪಾಲರೇ ಆಡಳಿತ ನಡೆಸುತ್ತಿದ್ದಾರೆ. ಪ್ರಸ್ತಾವಿತ ಮಸೂದೆಗೆ ಅನುಮೋದನೆ ಲಭಿಸಿದರೆ ಚಂಡೀಗಢಕ್ಕೆ ಈ ಹಿಂದೆ ಸ್ವತಂತ್ರ ಮುಖ್ಯ ಕಾರ್ಯದರ್ಶಿ ಇದ್ದಂತೆ ಸ್ವತಂತ್ರ ಆಡಳಿತಗಾರ ನೇಮಕಗೊಳ್ಳುತ್ತಾರೆ. ಪಂಜಾಬ್ ಹಾಗೂ ಹರಿಯಾಣದ ಜಂಟಿ ರಾಜಧಾನಿಯಾಗಿ ಚಂಡೀಗಢ ಮುಂದೆಯೂ ಕಾರ್ಯನಿರ್ವಹಿಸಲಿದೆ.
1966ರಲ್ಲಿ ಪಂಜಾಬ್ ಪುನರ್ ವಿಂಗಡಣೆಯಾದ ಬಳಿಕ ಚಂಡೀಗಢದಲ್ಲಿ ಮುಖ್ಯ ಕಾರ್ಯದರ್ಶಿ ಸ್ವತಂತ್ರವಾಗಿ ಆಡಳಿತ ನಡೆಸುತ್ತಿದ್ದರು. 1984ರ ಜೂನ್ 1ರಿಂದ ಅಲ್ಲಿ ಪಂಜಾಬ್‌ನ ರಾಜ್ಯಪಾಲರು ಆಡಳಿತ ನಡೆಸುತ್ತಿದ್ದಾರೆ. ರಾಜ್ಯಪಾಲರ ಆಡಳಿತದ ನಂತರ ಮುಖ್ಯ ಕಾರ್ಯದರ್ಶಿಯ ಹುದ್ದೆಯನ್ನು ಚಂಡೀಗಢದ ಆಡಳಿತಾಧಿಕಾರಿಯ ಸಲಹೆಗಾರ ಹುದ್ದೆಯಾಗಿ ಪರಿವರ್ತಿಸಲಾಗಿದೆ.
2016ರಲ್ಲಿ ಚಂಡೀಗಢಕ್ಕೆ ಮಾಜಿ ಐಎಎಸ್ ಅಧಿಕಾರಿ ಕೆ.ಜೆ. ಅಲ್ಫೋನ್ಸ್ ಅವರನ್ನು ನೇಮಿಸುವ ಮೂಲಕ ಕೇಂದ್ರ ಸರ್ಕಾರವು, ಸ್ವತಂತ್ರ ಆಡಳಿತಾಧಿಕಾರಿ ನೇಮಿಸುವ ಹಳೆಯ ಪದ್ಧತಿಯನ್ನೇ ಮರು ಸ್ಥಾಪಿಸಲು ಪ್ರಯತ್ನಿಸಿತು. ಆದರೆ, ಆಗಿನ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ತೀವ್ರ ವಿರೋಧದಿಂದ ಈ ನೇಮಕವನ್ನು ವಾಪಸ್ ಪಡೆಯಲಾಗಿತ್ತು.
‘ಚಂಡೀಗಢದ ಸಮಸ್ಯೆ ಇರಬಹುದು ಅಥವಾ ಪಂಜಾಬ್‌ನ ನೀರಿನ ಸಮಸ್ಯೆ ಇರಬಹುದು ಬಿಜೆಪಿಯು ಪಂಜಾಬ್ ಜನರ ಹಿತಾಸಕ್ತಿಯ ಪರವಾಗಿ ನಿಲ್ಲಲಿದೆ’ ಎಂದು ಪಂಜಾಬ್‌ನ ಬಿಜೆಪಿ ಮುಖಂಡ ಸುನಿಲ್ ಜಾಖಡ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.