ADVERTISEMENT

ದೇಶದ್ರೋಹ ಪ್ರಕರಣಗಳ ಕುರಿತು ಲೋಕಸಭೆಯಲ್ಲಿ ಕಾಂಗ್ರೆಸ್‌–ಸರ್ಕಾರದ ನಡುವೆ ವಾಕ್ಸಮರ

ಪಿಟಿಐ
Published 16 ಮಾರ್ಚ್ 2021, 11:24 IST
Last Updated 16 ಮಾರ್ಚ್ 2021, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ್ರೋಹ ಪ್ರಕರಣ ದಾಖಲಿಸುವ ವಿಷಯ ಮಂಗಳವಾರ ಲೋಕಸಭೆಯಲ್ಲಿ ಕಾಂಗ್ರೆಸ್‌ ಮತ್ತು ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಕಾಯ್ದೆ ದುರ್ಬಳಕೆ ಆಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದರೆ, ‘ಪ್ರಜಾಪ್ರಭುತ್ವದ ಪಾಠ ಮಾಡುವುದು ಬೇಡ’ ಎಂದು ಸಚಿವ ಜಿ.ಕಿಶನ್‌ರೆಡ್ಡಿ ಪ್ರತ್ಯುತ್ತರ ನೀಡಿದರು.

ತೆಲಂಗಾಣದ ಕಾಂಗ್ರೆಸ್ ಸದಸ್ಯ ಅನುಮುಲ ರೇವಂತ ರೆಡ್ಡಿ ಅವರು ಪ್ರಶ್ನೋತ್ತರ ವೇಳೆಯಲ್ಲಿ, ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ದೇಶದ್ರೋಹದ ಎಷ್ಟು ಪ್ರಕರಣಗಳು ದಾಖಲಾಗಿವೆ. ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ, ವಿಚಾರಣೆ ಚುರುಕುಗೊಳಿಸಲು ಸರ್ಕಾರ ಏನು ಕ್ರಮವಹಿಸಿದೆ ಎಂದು ಪ್ರಶ್ನಿಸಿದರು.

ಪರಿಸರ ಕಾರ್ಯಕರ್ತೆ ದಿಶಾರವಿ ವಿರುದ್ಧದ ಪ್ರಕರಣ ಮತ್ತು ಕಳೆದ ಜನವರಿ 26ರಂದು ರಾಜಧಾನಿಯಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣವನ್ನು ಕೇಂದ್ರೀಕರಿಸಿ ಅವರು ಪ್ರಶ್ನಿಸಿದ್ದರು. ಗೃಹಖಾತೆ ರಾಜ್ಯ ಸಚಿವರೂ ಆದ ಕಿಶನ್‌ ರೆಡ್ಡಿ, ಇದಕ್ಕೆ ಲಿಖಿತ ಉತ್ತರ ಮಂಡಿಸಿದ್ದರು.

ADVERTISEMENT

ಸಚಿವರು ತಮ್ಮ ಉತ್ತರದಲ್ಲಿ , 2014ರಲ್ಲಿ 47 ಪ್ರಕರಣ ದಾಖಲಾಗಿದೆ. 2015ರಲ್ಲಿ 30, 2016ರಲ್ಲಿ 35, 2017ರಲ್ಲಿ 51 ಮತ್ತು 2018ರಲ್ಲಿ 70 ಹಾಗೂ 2019ರಲ್ಲಿ 93 ಪ್ರಕರಣ ದಾಖಲಾಗಿದೆ. ಇದರಲ್ಲಿ ಕೇಂದ್ರದ ನೇರ ಪಾತ್ರ ಇಲ್ಲ ಎಂದು ತಿಳಿಸಿದ್ದರು.

ಉತ್ತರದಿಂದ ತೃಪ್ತರಾಗದ ರೆಡ್ಡಿ, ನಾನು 10 ವರ್ಷದ ಮಾಹಿತಿ ಕೇಳಿದ್ದೆ. ಒಂಬತ್ತು ವರ್ಷದ ವಿವರ ನೀಡಲಾಗಿದೆ. ಭಾಗಶಃ ಮಾಹಿತಿ ನೀಡಿ ಸದನವನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ. ದೇಶದಲ್ಲಿ 2014ರ ನಂತರ ಸರ್ಕಾರದ ನೀತಿ ಖಂಡಿಸುವ ಎಲ್ಲರ ಮೇಲೂ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳ ಜನಪ್ರಿಯತೆ, ಮಾಧ್ಯಮ ಜಾಗೃತಿಯ ನಂತರ ಕಾಂಗ್ರೆಸ್‌ ಈಗ ಪ‍್ರಜಾಪ್ರಭುತ್ವ ಕುರಿತು ದೊಡ್ಡ ಭಾಷಣ ನೀಡುತ್ತಿದೆ. ಆದರೂ, ದೇಶದ್ರೋಹ ಪ್ರಕರಣಗಳ ಸಂಖ್ಯೆ ಕಡಿಮೆಯೇ ಆಗಿದೆ ಎಂದು ಸಚಿವರು ತಿಳಿಸಿದರು.

ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ, ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್‌ ದುರ್ಬಳಕೆ ಆಗುತ್ತಿದೆ ಎಂದು ಟೀಕಿಸಿದರು. ಸಚಿವರು ಇದಕ್ಕೆ, ‘ಕಾಂಗ್ರೆಸ್‌ ಈಗ ಪ್ರಜಾಪ್ರಭುತ್ವದ ಭಾಷಣ ಮಾಡುತ್ತಿದೆ. ಅದು, ಜಯಪ್ರಕಾಶ್ ನಾರಾಯಣ ಮತ್ತು ಎ.ಬಿ.ವಾಜಪೇಯಿ ವಿರುದ್ಧವೇ ಆಂತರಿಕ ಭದ್ರತಾ ಕಾಯ್ದೆ ನಿರ್ವಹಣೆ ಅನ್ವಯ ಮೊಕದ್ದಮೆ ದಾಖಲಿಸಿತ್ತು’ ಎಂದು ಉಲ್ಲೇಖಿಸಿದರು.

ದೇಶದ್ರೋಹ ಆರೋಪದ ವ್ಯಾಖ್ಯಾನ ನಿಗದಿಪಡಿಸಲು ಸರ್ಕಾರ ಚಿಂತನೆ ನಡೆಸಿದೆಯೇ ಎಂಬ ಪ್ರಶ್ನೆಗೆ ಸಚಿವರು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ನೇತೃತ್ವದಲ್ಲಿ ಫೆಬ್ರುವರಿ 2020ರಲ್ಲಿಅಪರಾಧ ಕಾಯ್ದೆ ಸುಧಾರಣಾ ಸಮಿತಿ ರಚಿಸಲಾಗಿದೆ ಎಂದರು.

ಅಲ್ಲದೆ, ಗೃಹ ಸಚಿವ ಅಮಿತ್ ಶಾ ಅವರು ಉದ್ದೇಶಿತ ತಿದ್ದುಪಡಿ ಕುರಿತು ಅಗತ್ಯ ಸಲಹೆಯನ್ನು ನೀಡುವಂತೆ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು, ನ್ಯಾಯಾಂಗ ಸಂಸ್ಥೆಗಳಿಗೆ ಪತ್ರವನ್ನು ಬರೆದಿದ್ದಾರೆ. ಸಮಿತಿಯ ವರದಿ ಬಂದ ಬಳಿಕ ಸಂಸತ್ತಿನಲ್ಲಿಯೂ ಈ ಕುರಿತು ಚರ್ಚೆ ನಡೆಯಲಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.