ADVERTISEMENT

ಪಿ.ಎಂ ಕೇರ್ಸ್ ನಿಧಿಗೆ ದೇಣಿಗೆ ಕುರಿತು ಕಾಂಗ್ರೆಸ್‌–ಸರ್ಕಾರ ವಾಗ್ವಾದ

ಪಿಟಿಐ
Published 15 ಮಾರ್ಚ್ 2021, 11:08 IST
Last Updated 15 ಮಾರ್ಚ್ 2021, 11:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪಿ.ಎಂ ಕೇರ್ಸ್‌ ನಿಧಿಗೆ ಬಂದಿರುವ ದೇಣಿಗೆಯ ವಿಷಯ ಸೋಮವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಸರ್ಕಾರದ ನಡುವೆ ಬಿಸಿ ಚರ್ಚೆಗೆ ಆಸ್ಪದವಾಯಿತು.

ಎಲ್ಐಸಿ ಜನರಿಗೆ ಅನುಕೂಲ ಕಲ್ಪಿಸುವ ಬದಲು ಈ ನಿಧಿಗೆ ನೆರವು ನೀಡಿತು ಎಂದು ವಿರೋಧಪಕ್ಷ ಆರೋಪಿಸಿತು. ಇದಕ್ಕೆ ಎದಿರೇಟು ನೀಡಿದ ಸಚಿವ ಅನುರಾಗ್‌ ಠಾಕೂರ್ ಅವರು ರಾಜೀವ್‌ಗಾಂಧಿ ಫೌಂಡೇಷನ್‌ ಚೀನಾದಿಂದಲೂ ದೇಣಿಗೆ ಸ್ವೀಕರಿಸಿದೆ ಎಂದು ಟೀಕಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಲೋಕಸಭೆಯ ಕಾಂಗ್ರೆಸ್‌ನ ಹಂಗಾಮಿ ನಾಯಕ ರಣವೀತ್‌ ಸಿಂಗ್‌ ಅವರು, ಲಾಕ್‌ಡೌನ್‌ ಅವಧಿಯಲ್ಲಿ ವಲಸೆ ಕಾರ್ಮಿಕರು ಮತ್ತು ಕಡುಬಡವರು ತೀವ್ರ ಕಷ್ಟವನ್ನು ಅನುಭವಿಸಬೇಕಾಯಿತು ಎಂದು ದೂರಿದರು.

ADVERTISEMENT

‘ಈ ಜನರಿಗೆ ಸಿಗಬೇಕಾದ ನೆರವು ಸಿಗಲಿಲ್ಲ. ಎಲ್ಐಸಿಯೂ ನಿಧಿಯನ್ನು ಕೇವಲ ಪಿಎಂ ಕೇರ್ಸ್‌ ನಿಧಿಗೆ ನೀಡುತ್ತದೆ. ಏಕೆ ಹೀಗೆ? ಎಂದು ಪ್ರಶ್ನಿಸಿದರು. ಇದಕ್ಕೆ ‘ರಾಜಕೀಯ ಉತ್ತರ ನೀಡಬೇಡಿ’ ಎಂದೂ ಕೋರಿದರು. ಈ ಹಂತದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು, ‘ರಾಜಕೀಯ ಪ್ರಶ್ನೆ ಕೇಳಿದರೆ, ರಾಜಕೀಯ ಉತ್ತರವನ್ನೇ ಪಡೆಯುತ್ತೀರಿ’ ಎಂದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್, ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳುವ ವೇಳೆಯಲ್ಲಿ ಸಮಸ್ಯೆಯಾಯಿತು ಎಂದರು. ಅಲ್ಲದೆ, ಪರಿಹಾರ ಒದಗಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಿದರು.

ಪಿ.ಎಂ ಕೇರ್ಸ್ ನಿಧಿಗೆ ಪಿಂಚಣಿ ಮೊತ್ತ ಮತ್ತು ನರೇಗಾ ಯೋಜನೆಯ ಕೂಲಿ ಮೊತ್ತವನ್ನು ನೀಡಿರುವ ನಿದರ್ಶನಗಳಿವೆ. ಸಾರ್ವಜನಿಕ ವಲಯದ ಸಂಸ್ಥೆಗಳೂ ಕೊಡುಗೆ ನೀಡಿವೆ. ಪಿ.ಎಂ ಕೇರ್ಸ್ ನಿಧಿಯನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ತುರ್ತು ಸಂದರ್ಭದಲ್ಲಿ ನೆರವಾಗಲು ಸ್ಥಾಪಿಸಲಾಯಿತು ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷವು ರಾಜೀವ್‌ಗಾಂಧಿ ಫೌಂಡೇಷನ್‌ನ ಖಾತೆ ತುಂಬಲು ಇಂತದೇ ಕೆಲಸ ಮಾಡಿತು. ಖಾತೆ ಮುಚ್ಚಬೇಕಾದ್ದರಿಂದ ಕಾಂಗ್ರೆಸ್‌ಗೆ ನೋವಾಗುತ್ತಿದೆ. ಫೌಂಡೇಷನ್‌ಗೆ ಚೀನಾದಿಂದಲೂ ನೆರವು ಬಂದಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.