ಮುಂಬೈ: ರೈತ ವಿರೋಧಿ ಹೇಳಿಕೆ ಕೊಟ್ಟ ಸಚಿವ ಮತ್ತು ಬಿಜೆಪಿ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಅವರು ಮಂಗಳವಾರ ಸಭಾಧ್ಯಕ್ಷರ ಪೀಠದ ಬಳಿಗೆ ಹೋಗಿ ಪ್ರತಿಭಟನೆ ನಡೆಸಿದರು. ಹೀಗಾಗಿ ಅವರನ್ನು ಸಭಾಧ್ಯಕ್ಷರು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಿದರು.
ಕೃಷಿ ಸಚಿವ ಮಾಣಿಕ್‌ರಾವ್ ಕೊಕಾಟೆ ಮತ್ತು ಬಿಜೆಪಿ ಶಾಸಕ ಬಬನ್‌ರಾವ್ ಲೋನಿಕರ್ ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರಶ್ನೋತ್ತರ ಕಲಾಪದ ನಂತರ ಮಾಜಿ ಸಭಾಧ್ಯಕ್ಷರೂ ಆಗಿರುವ ಪಟೋಲೆ ಅವರು ಸಭಾಧ್ಯಕ್ಷ ರಾಹುಲ್ ನರ್ವೇಕರ್ ಅವರ ಪೀಠದ ಬಳಿಗೆ ಹೋಗಿ ವಾಗ್ವಾದಕ್ಕೆ ಇಳಿದರು.
ಐದು ನಿಮಿಷ ಕಲಾಪ ಮುಂದೂಡಿ ಮತ್ತೆ ಸೇರಿದಾಗ ಪಟೋಲೆ ಅವರ ವರ್ತನೆಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಆಕ್ಷೇಪ ವ್ಯಕ್ತಪಡಿಸಿ, ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು. ಆನಂತರವೂ ಪೀಠದ ಮುಂದೆ ಪಟೋಲೆ ಅವರು ಪ್ರತಿಭಟನೆ ನಡೆಸಿದ್ದರಿಂದ ಸಭಾಧ್ಯಕ್ಷರು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಿದರು.
ಬಿಜೆಪಿ ಶಾಸಕ ಲೋನಿಕರ್ ಅವರು ಇತ್ತೀಚೆಗೆ ರೈತ ಸಮಾವೇಶದಲ್ಲಿ, ‘ನನ್ನ ಪಕ್ಷ (ಬಿಜೆಪಿ) ಮತ್ತು ಸರ್ಕಾರವನ್ನು ಟೀಕಿಸುವವರು ಬಟ್ಟೆ, ಶೂ, ಮೊಬೈಲ್, ವಿವಿಧ ಯೋಜನೆಗಳ ಆರ್ಥಿಕ ಸಹಾಯ ಮತ್ತು ಬಿತ್ತನೆ ಬೀಜಕ್ಕೆ ಹಣವನ್ನು ನಮ್ಮಿಂದಲೇ ಪಡೆಯುತ್ತಿದ್ದಾರೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಹೇಳಿಕೆ ನೀಡಿದ್ದರು.
ಸಚಿವ ಕೊಕಾಟೆ ಅವರು ‘ಸಾಲ ಮನ್ನಾ ಹಣವನ್ನು ರೈತರು ಮದುವೆಗಳಿಗೆ ಬಳಸುತ್ತಿದ್ದಾರೆ. ಒಂದು ರೂಪಾಯಿಯನ್ನು ಭಿಕ್ಷುಕರೂ ಪಡೆಯುವುದಿಲ್ಲ. ಸರ್ಕಾರವು ಅಷ್ಟು ಮೊತ್ತಕ್ಕೆ ಬೆಳೆ ವಿಮೆ ನೀಡುತ್ತಿದೆ. ಕೆಲವರು ಇದನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.