ADVERTISEMENT

ರಾಷ್ಟ್ರಪತಿ ಚುನಾವಣೆ: ಗೋವಾ ಕಾಂಗ್ರೆಸ್‌ನ ಐವರು ಶಾಸಕರು ಚೆನ್ನೈಗೆ ಸ್ಥಳಾಂತರ

ಪಿಟಿಐ
Published 16 ಜುಲೈ 2022, 13:40 IST
Last Updated 16 ಜುಲೈ 2022, 13:40 IST

ಪಣಜಿ (ಪಿಟಿಐ): ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಗೋವಾ ಕಾಂಗ್ರೆಸ್‌, ತನ್ನ 11 ಮಂದಿ ಶಾಸಕರ ಪೈಕಿ ಐವರನ್ನು ಚೆನ್ನೈಗೆ ಸ್ಥಳಾಂತರಿಸಿದೆ.

‘ಶಾಸಕರಾದ ಸಂಕಲ್ಪ್‌ ಅಮೋನ್‌ಕರ್‌, ಯೂರಿ ಅಲೆಮಾವೊ, ಆಲ್ಟನ್‌ ಡಿ ಕೋಸ್ಟಾ, ರುಡಾಲ್ಫ್‌ ಫರ್ನಾಂಡೀಸ್‌ ಮತ್ತು ಕಾರ್ಲೋಸ್‌ ಅಲ್ವೆರಸ್‌ ಫೆರೇರಾ ಅವರನ್ನು ಶುಕ್ರವಾರ ರಾತ್ರಿ ಚೆನ್ನೈಗೆ ಕಳುಹಿಸಲಾಗಿದೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

‘ವಿಧಾನಸಭೆ ಅಧಿವೇಶನ ಮುಗಿದ ಕೂಡಲೇ ಶಾಸಕರನ್ನು ವಿಶೇಷ ವಿಮಾನದಲ್ಲಿ ಚೆನ್ನೈಗೆ ಕರೆದೊಯ್ಯಲಾಗಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಿಗದಿಯಾಗಿದ್ದು, ಅಂದು ಶಾಸಕರೆಲ್ಲಾ ಚೆನ್ನೈಯಿಂದ ಗೋವಾಕ್ಕೆ ಮರಳಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಭಿನ್ನ ಬಣದಲ್ಲಿ ಗುರುತಿಸಿಕೊಂಡಿದ್ದ ದಿಗಂಬರ ಕಾಮತ್‌, ಮೈಕಲ್‌ ಲೋಬೊ, ಡೆಲಿಲಾ ಲೋಬೊ, ಕೇದಾರ್‌ ನಾಯ್ಕ, ಅಲೆಕ್ಸೊ ಸೀಕ್ವೆರಾ ಮತ್ತು ರಾಜೇಶ್‌ ಫಾಲ್‌ದೇಸಾಯಿ ಅವರನ್ನು ಚೆನ್ನೈಗೆ ಕರೆದುಕೊಂಡು ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಕಲ್‌ ಲೋಬೊ, ‘ಐವರು ಶಾಸಕರನ್ನಷ್ಟೇ ಚೆನ್ನೈಗೆ ಕರೆದುಕೊಂಡು ಹೋಗಿರುವುದು ಏಕೆ ಎಂಬುದು ತಿಳಿದಿಲ್ಲ. ಈ ಕುರಿತು ನಮಗೆ ಯಾವ ಮಾಹಿತಿಯೂ ಇಲ್ಲ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ’ ಎಂದಿದ್ದಾರೆ.

ಬಿಜೆಪಿ ಜೊತೆ ಸೇರಿ ಪಕ್ಷ ಇಬ್ಭಾಗ ಮಾಡಲು ಮುಂದಾಗಿದ್ದ ಆರೋಪದಡಿ ಮೈಕಲ್‌ ಲೋಬೊ ಅವರನ್ನು ಪ್ರತಿ‍ಪಕ್ಷ ನಾಯಕ ಸ್ಥಾನದಿಂದ ಹೋದ ವಾರ ವಜಾಗೊಳಿಸಲಾಗಿತ್ತು. ಲೋಬೊ ಹಾಗೂ ದಿಗಂಬರ ಕಾಮತ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಗೋವಾ ಕಾಂಗ್ರೆಸ್‌ ಅರ್ಜಿ ಸಲ್ಲಿಸಿತ್ತು. ಈ ಬೆಳವಣಿಗೆಗಳ ನಂತರ ಪ್ರತಿಕ್ರಿಯಿಸಿದ್ದ ಲೋಬೊ ತಾವು ಕಾಂಗ್ರೆಸ್‌ ಬಿಟ್ಟು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮುಕುಲ್‌ ವಾಸ್ನಿಕ್‌ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಭಿನ್ನ ಬಣದವರೂ ಸೇರಿದಂತೆ 10 ಮಂದಿ ಶಾಸಕರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.