ADVERTISEMENT

ಸಂಸತ್‌ ಸಿಬ್ಬಂದಿ ಸಮವಸ್ತ್ರದಲ್ಲಿ ಕಮಲದ ಚಿತ್ರ: ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ
Published 12 ಸೆಪ್ಟೆಂಬರ್ 2023, 15:37 IST
Last Updated 12 ಸೆಪ್ಟೆಂಬರ್ 2023, 15:37 IST
   

ನವದೆಹಲಿ: ಸಂಸತ್‌ ಸಿಬ್ಬಂದಿಯ ನೂತನ ಸಮವಸ್ತ್ರದ ಮೇಲೆ ಬಿಜೆಪಿಯ ಚಿಹ್ನೆ ‘ಕಮಲ’ದ ಚಿತ್ರವನ್ನು ಮುದ್ರಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಸರಿ ಪಕ್ಷದ ವಿರುದ್ಧ ಕಾಂಗ್ರೆಸ್‌ ಮಂಗಳವಾರ ಟೀಕಾಪ್ರಹಾರ ನಡೆಸಿದೆ.

‘ಸಂಸತ್ ಒಂದು ಪಕ್ಷಕ್ಕೆ ಸೇರಿದ್ದು ಎಂಬಂತೆ ಬಿಂಬಿಸಲು ಬಿಜೆಪಿ ಹೊರಟಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಸಿಬ್ಬಂದಿಯ ಸಮವಸ್ತ್ರದ ಮೇಲೆ ಕಮಲದ ಚಿತ್ರವನ್ನೇ ಯಾಕೆ ಮುದ್ರಿಸಲಾಗಿದೆ. ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲವೇ ರಾಷ್ಟ್ರೀಯ ಪಕ್ಷಿ ನವಿಲಿನ ಚಿತ್ರವನ್ನು ಯಾಕೆ ಮುದ್ರಿಸಿಲ್ಲ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಚೇತಕ ಮಾಣಿಕಂ ಟ್ಯಾಗೋರ್‌ ಪ್ರಶ್ನಿಸಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕಮಲ ಮಾತ್ರ ಯಾಕೆ? ನವಿಲು ಅಥವಾ ಹುಲಿಯ ಚಿತ್ರ ಯಾಕಿಲ್ಲ? ಒಹ್, ಅವು ಬಿಜೆಪಿ ಪಕ್ಷದ ಚಿಹ್ನೆಗಳು ಅಲ್ಲ! ಓಂ ಬಿರ್ಲಾ ಅವರೇ, ಇಷ್ಟೊಂದು ಅಧೋಗತಿಗೆ ಇಳಿದಿದ್ದು ಯಾಕೆ?’ ಎಂದಿದ್ದಾರೆ.

‘ಅವರು ಎಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ. ಜಿ20 ಶೃಂಗಸಭೆ ಸಂದರ್ಭದಲ್ಲಿಯೂ ಇದೇ ರೀತಿ ಮಾಡಿದ್ದರು. ಈಗ ಮತ್ತೆ ಅದೇ ವರಸೆ. ಅದು (ಕಮಲ) ರಾಷ್ಟ್ರೀಯ ಹೂವು ಎನ್ನುತ್ತಾರೆ’ ಎಂದು ಟ್ಯಾಗೋರ್‌ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.