ADVERTISEMENT

ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯ: ಕಾಂಗ್ರೆಸ್ ತೀವ್ರ ಪ್ರತಿಭಟನೆ

ಪಿಟಿಐ
Published 10 ಜೂನ್ 2022, 11:14 IST
Last Updated 10 ಜೂನ್ 2022, 11:14 IST
ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯ: ಕೇರಳದಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ: ಪಿಟಿಐ ಚಿತ್ರ
ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯ: ಕೇರಳದಲ್ಲಿ ಕಾಂಗ್ರೆಸ್ ತೀವ್ರ ಪ್ರತಿಭಟನೆ: ಪಿಟಿಐ ಚಿತ್ರ   

ತಿರುವನಂತಪುರ: ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಒತ್ತಾಯಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ಸತತ ಮೂರನೇ ದಿನವೂ ಪ್ರತಿಪಕ್ಷ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರ ಜೊತೆಯೇ ಕಾರ್ಯಕರ್ತರು ಸಂಘರ್ಷಕ್ಕೆ ಇಳಿದಿದ್ದ ಬಗ್ಗೆಯೂ ವರದಿಯಾಗಿದೆ.

ರಾಜ್ಯದಾದ್ಯಂತ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸಿಎಂ ಪಿಣರಾಯಿ ವಿಜಯನ್ ಮತ್ತು ಎಲ್‌ಡಿಎಫ್ ಮೈತ್ರಿಕೂಟದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ADVERTISEMENT

ತಿರುವನಂತಪುರ, ಕೋಯಿಕ್ಕೋಡ್, ಮಲಪ್ಪುರಂ, ಕಣ್ಣೂರು ಸೇರಿದಂತೆ ಹಲವೆಡೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ, ಜಲಫಿರಂಗಿ ಪ್ರಯೋಗಿಸಿದ್ದಾರೆ.

ಕೊಲ್ಲಂನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದ ಬಗ್ಗೆ ವರದಿಯಾಗಿದೆ. ಇಬ್ಬರು ಪೊಲೀಸರು ಗಾಯಗೊಂಡಿದ್ದರೆ, ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊಟ್ಟಯಂನಲ್ಲಿ ಪೊಲೀಸ್ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸುಧಾಕರನ್ ರಾಜ್ಯವ್ಯಾಪಿ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ. ಎರ್ನಾಕುಲಂನಲ್ಲಿ ವಿಪಕ್ಷ ನಾಯಕ ಸತೀಶನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಈ ನಡುವೆ ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಕೃತ್ಯ ನಡೆದರೆ ಕಠಿಣ ಕ್ರಮ ಜರುಗಿಸುವುದಾಗಿ ಪ್ರದೇಶ ಕಾಂಗ್ರೆಸ್ ಸಮಿತಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಇತ್ತೀಚೆಗೆ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದ ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್, ಪ್ರಕರಣದಲ್ಲಿ ಸಿಎಂ ಪಿಣರಾಯಿ ವಿಜಯನ್, ಸಂಬಂಧಿಕರು ಮತ್ತು ಸರ್ಕಾರದ ಉನ್ನತಾಧಿಕಾರಿಗಳ ಪಾತ್ರದ ಬಗ್ಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.