ADVERTISEMENT

ವಿಮಾನ ನಿಲ್ದಾಣಗಳ ಖಾಸಗೀಕರಣದಲ್ಲಿ ಭ್ರಷ್ಟಾಚಾರ: ತನಿಖೆಗೆ ಕಾಂಗ್ರೆಸ್ ಆಗ್ರಹ

ಪಿಟಿಐ
Published 15 ಸೆಪ್ಟೆಂಬರ್ 2020, 15:01 IST
Last Updated 15 ಸೆಪ್ಟೆಂಬರ್ 2020, 15:01 IST
ಕೆ.ಸಿ.ವೇಣುಗೋಪಾಲ್
ಕೆ.ಸಿ.ವೇಣುಗೋಪಾಲ್   

ನವದೆಹಲಿ: ದೇಶದಲ್ಲಿ ಆರು ವಿಮಾನನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರಕರಣದ ತನಿಖೆಗೆ ಆಗ್ರಹಿಸಿದೆ.

ಆದರೆ, ಕಾಂಗ್ರೆಸ್ ಪಕ್ಷದ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ಮೋದಿ ಅವರ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ರಾಜ್ಯಸಭೆಯಲ್ಲಿ ಮಂಗಳವಾರ‘ವೈಮಾನಿಕ (ತಿದ್ದುಪಡಿ) ಮಸೂದೆ 2020’ ಕುರಿತ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್‌ ಅವರು, ‘ಅಭಿವೃದ್ಧಿ ಹೆಸರಿನಲ್ಲಿ ವಿಮಾನನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಮೂಲಕ ಸರ್ಕಾರ ಏಕಸ್ವಾಮ್ಯಕ್ಕೆ ಬೆಂಬಲ ನೀಡುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಖಾಸಗೀಕರಣದ ಹಿಂದೆ ಏಕಸ್ವಾಮ್ಯದ ಯತ್ನವಿದೆ. ಭವಿಷ್ಯದಲ್ಲಿ ಎಲ್ಲ ವಿಮಾನನಿಲ್ದಾಣಗಳ ಮಾಲೀಕತ್ವ ಒಂದೇ ಕಂಪನಿಯದ್ದಾಗಿರುತ್ತದೆ. ಇದು ಹೇಗಾಗುತ್ತದೆ? ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ. ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯೂ ಇದೆ. ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಖಾಸಗಿ ಸಂಸ್ಥೆಯೊಂದಕ್ಕೆ ನೆರವಾಗುವಂತೆ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಅದಾನಿ ಸಮೂಹ ಇದುವರೆಗೂ ದೇಶದಲ್ಲಿ ಅಹಮದಾಬಾದ್, ಲಖನೌ, ಬೆಂಗಳೂರು, ಜೈಪುರ, ಗುವಾಹಟಿ ಮತ್ತು ತಿರುವನಂತಪುರದ ವಿಮಾನ ನಿಲ್ದಾಣಗಳ ನಿರ್ವಹಣೆಗೆ ಬಿಡ್‌ ಗೆದ್ದುಕೊಂಡಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.