ADVERTISEMENT

ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ಚಾಚೂ ತಪ್ಪದೆ ಕೆಲಸ ಮಾಡುತ್ತಿದೆ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 8:55 IST
Last Updated 5 ಜೂನ್ 2021, 8:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್‌ಗೆ ಅಧಿಕಾರ ಇರಲಿ, ಇಲ್ಲದಿರಲಿ ಚಾಚೂ ತಪ್ಪದೆ ಮಾಡುವ ಕೆಲಸವೆಂದರೆ ಅದು ದೇಶದ ಹಿತಾಸಕ್ತಿಯ ವಿರುದ್ಧ ಕಾರ್ಯಾಚರಿಸುವುದಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

ಸೆಂಟ್ರಲ್ ವಿಸ್ತಾ ಯೋಜನೆ ಜಾರಿ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದ ಕಾಂಗ್ರೆಸ್‌ ಈಗ ನೂತನ ಸಂಸತ್‌ ಭವನಕ್ಕೆ ವಿರೋಧಿಸುತ್ತಿದೆ’ ಎಂದು ಆರೋಪಿಸಿದೆ.

‘ಪ್ರಧಾನಿ ಮೋದಿ ಸರ್ಕಾರ ‌ರೂಪಿಸುತ್ತಿರುವ ಸೆಂಟ್ರಲ್‌ ವಿಸ್ತಾ ಯೋಜನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮಾಡುತ್ತಿರುವುದೇನು?, ತನ್ನದೇ ಆಡಳಿತವಿರುವ ರಾಜ್ಯಗಳಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಗಳ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿಲ್ಲವೇಕೆ?’ ಎಂದು ಬಿಜೆಪಿ ಟೀಕಿಸಿದೆ.


‘ಕಾಂಗ್ರೆಸ್‌ ಇಂದು ಏನನ್ನು ತಪ್ಪು ಎಂದು ಬಿಂಬಿಸುತ್ತಿದೆಯೋ ಆ ತಪ್ಪುಗಳನ್ನು ನೆಹರೂ ಕಾಲದಿಂದಲೂ ಮಾಡುತ್ತಲೇ ಬಂದಿದೆ. ನೆಹರೂ ಸ್ಮಾರಕ - 52 ಎಕರೆ, ಇಂದಿರಾ ಸ್ಮಾರಕ - 45 ಎಕರೆ, ರಾಜೀವ್‌ ಸಮಾಧಿ - 15 ಎಕರೆ ಆದರೆ, ಇದಕ್ಕಿಂತ ಕಡಿಮೆ ಜಾಗ ವಿನಿಯೋಗವಾಗಲಿರುವ ಸೆಂಟ್ರಲ್‌ ವಿಸ್ತಾ ಯೋಜನೆಗೆ ಕಾಂಗ್ರೆಸ್ ವಿರೋಧವೇಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ರಾಜಸ್ಥಾನದಲ್ಲಿ ₹266 ಕೋಟಿ ವೆಚ್ಚದಲ್ಲಿ ಶಾಸಕರ ಭವನ ನಿರ್ಮಾಣ, ಮಹಾರಾಷ್ಟ್ರದಲ್ಲಿ 900 ಕೋಟಿ ವೆಚ್ಚದಲ್ಲಿ ಶಾಸಕರ ವಸತಿ ನಿರ್ಮಾಣ ಆದರೆ, ದೇಶದ ಪ್ರಜಾಪ್ರಭುತ್ವದ ಸಂಕೇತವಾಗಲಿರುವ ನೂತನ ಸಂಸತ್‌ ಭವನಕ್ಕೆ ಮಾತ್ರ ಕಾಂಗ್ರೆಸ್‌ ವಿರೋಧ ಏಕೆ’ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ... ಸಂಸತ್ ಭವನಕ್ಕೆ ಮೂಢನಂಬಿಕೆ ಬಣ್ಣ: ಮಾಜಿ ಅಧಿಕಾರಿಗಳ ವಿರುದ್ಧ ಸಚಿವ ಹರದೀಪ್ ಕಿಡಿ

‘ದೇಶದಲ್ಲಿ ಕೋವಿಡ್ ಸಂಕಷ್ಟವಿದ್ದರೂ ಇಟಲಿಯಲ್ಲಿ ಕೋವಿಡ್ ಲಸಿಕೆ ನೀಡಲು ಆರಂಭಿಸಿದ ದಿನದಂದೇ ಕಾಂಗ್ರೆಸ್ ಯುವರಾಜ‌ ರಾಹುಲ್ ಗಾಂಧಿ ಇಟಲಿ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಇಂತಹ ವ್ಯಕ್ತಿಗಳು ಇಂದು, ದೇಶ ಸಂಕಷ್ಟದಲ್ಲಿರುವಾಗ ಸೆಂಟ್ರಲ್ ವಿಸ್ಟಾದಂತಹ ಕಾಮಗಾರಿಗಳು ಅನಗತ್ಯ ಎನ್ನುವುದು ಹಾಸ್ಯಾಸ್ಪದ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT