ADVERTISEMENT

₹ 895 ಕೋಟಿ ಆಸ್ತಿ ಘೋಷಿಸಿಕೊಂಡ ಕಾಂಗ್ರೆಸ್‌ ಅಭ್ಯರ್ಥಿ

ಲೋಕಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 11:16 IST
Last Updated 23 ಮಾರ್ಚ್ 2019, 11:16 IST
   

ಹೈದರಾಬಾದ್‌: ತೆಲಂಗಾಣದ ಚೆವೆಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕೊಂಡ ವಿಶ್ವೇಶ್ವರ್ ರೆಡ್ಡಿ ಅವರು ತಮ್ಮ ಕುಟುಂಬವು ₹ 895 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರೊಂದಿಗೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅತ್ಯಂತ ಶ್ರೀಮಂತ ರಾಜಕಾರಣಿ ಎನಿಸಿದ್ದಾರೆ.

ರೆಡ್ಡಿ ತಮ್ಮ ಹೆಸರಿನಲ್ಲಿ ₹ 225 ಕೋಟಿ,ಅಪೋಲೋ ಆಸ್ಪತ್ರೆಯ ಜಂಟಿ ನಿರ್ದೇಶಕಿ ಆಗಿರುವ ಪತ್ನಿ ಕೆ. ಸಂಗೀತ ರೆಡ್ಡಿ ಹೆಸರಿನಲ್ಲಿ ಒಟ್ಟು₹ 613 ಕೋಟಿ ಚರಾಸ್ತಿ ಹೊಂದಿರುವುದಾಗಿ ಹಾಗೂ ಮಗನ ಹೆಸರಿನಲ್ಲಿ ₹ 20 ಕೋಟಿ ಮೌಲ್ಯದ ಚರಾಸ್ತಿ ಇರುವುದಾಗಿ ಘೋಷಿಸಿದ್ದಾರೆ.

ಅದಾಗ್ಯೂ ಕುಟುಂಬದ ಯಾರೊಬ್ಬರ ಬಳಿಯೂ ಕಾರು ಸೇರಿದಂತೆ ಯಾವುದೇ ವಾಹನವಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಪತ್ನಿ ಹಾಗೂ ತನ್ನ ಹೆಸರಲ್ಲಿ ಕ್ರಮವಾಗಿ ₹ 1.81 ಕೋಟಿ ಮತ್ತು ₹ 36 ಕೋಟಿ ಸ್ಥಿರಾಸ್ತಿ ಇದೆ ಎಂದುನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗಳಿಗೆ ನೀಡಿರುವ ಆಸ್ತಿ ವಿವರರಲ್ಲಿ ಉಲ್ಲೇಖಿಸಿದ್ದಾರೆ.

2014ರ ಚುನಾವಣೆ ವೇಳೆ ಕುಟುಂಬದ ಆಸ್ತಿ ಮೌಲ್ಯ ಒಟ್ಟು ₹ 528 ಕೋಟಿ ಎಂದು ದಾಖಲೆ ನೀಡಿದ್ದರು. ಆಗ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್‌) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಬಳಿಕ ವಿಧಾನಸಭೆ ಚುನಾವಣೆ ವೇಳೆ ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ನಾರಾಯಣ ಗ್ರೂಪ್ಸ್‌ ಮಾಲೀಕರಾದ ಆಂಧ್ರಪ್ರದೇಶ ಸಚಿವ ಪಿ.ನಾರಾಯಣ ಅವರು, ನೆಲ್ಲೂರು ವಿಧಾನಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ಶುಕ್ರವಾರ ₹ 667 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಒಟ್ಟು ₹ 574 ಕೋಟಿ ಆಸ್ತಿ ಹೊಂದಿರುವುದಾಗಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್‌. ಜಗನ್‌ಮೋಹನ ರೆಡ್ಡಿ ಅವರು ₹ 500 ಕೋಟಿ ಆಸ್ತಿ ಹೊಂದಿರುವುದಾಗಿ ದಾಖಲೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.