ADVERTISEMENT

ವಿಪಕ್ಷಗಳ ವಿರುದ್ಧ ಸುಳ್ಳು ಕೇಸ್:‘ಮಹಾ’ ಡಿಜಿಪಿ ರಶ್ಮಿ ವಿರುದ್ಧ ಕಾಂಗ್ರೆಸ್ ದೂರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 14:31 IST
Last Updated 31 ಅಕ್ಟೋಬರ್ 2024, 14:31 IST
ರಶ್ಮಿ ಶುಕ್ಲಾ – ಎಕ್ಸ್‌ ಖಾತೆ ಚಿತ್ರ
ರಶ್ಮಿ ಶುಕ್ಲಾ – ಎಕ್ಸ್‌ ಖಾತೆ ಚಿತ್ರ   

ಮುಂಬೈ: ಮಹಾರಾಷ್ಟ್ರದ ಡಿಜಿಪಿ ರಶ್ಮಿ ಶುಕ್ಲಾ ಅವರು ರಾಜ್ಯದ ಪೊಲೀಸ್ ಆಯುಕ್ತರನ್ನು ಮತ್ತು ಎಸ್‌ಪಿಗಳನ್ನು ಸಂಪರ್ಕಿಸಿ, ವಿರೋಧ ಪಕ್ಷಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಸೂಚನೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.

ರಶ್ಮಿ ಶುಕ್ಲಾ ಅವರನ್ನು ಹುದ್ದೆಯಿಂದ ತೆಗೆಯಬೇಕು ಎಂದು ಪಕ್ಷವು ಚುನಾವಣಾ ಆಯೋಗವನ್ನು ಮತ್ತೊಮ್ಮೆ ಒತ್ತಾಯಿಸಿದೆ.

ಈ ವಿಚಾರವಾಗಿ ಕಾನೂನು ಸಮರ ಸಾರುವುದಾಗಿಯೂ ಕಾಂಗ್ರೆಸ್ ಹೇಳಿದೆ. ‘ರಶ್ಮಿ ಅವರ ಕೃತ್ಯಗಳನ್ನು ಚುನಾವಣಾ ಆಯೋಗವು ಉಪೇಕ್ಷಿಸುತ್ತಿರುವಂತೆ ಕಾಣುತ್ತಿದೆ’ ಎಂದು ಎಂಪಿಸಿಸಿ ಅಧ್ಯಕ್ಷ ನಾನಾ ಪಟೋಲೆ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಪತ್ರದ ಪ್ರತಿಯೊಂದನ್ನು ಅವರು ಮಹಾರಾಷ್ಟ್ರದ ಮುಖ್ಯ ಚುನಾವಣಾ ಆಯುಕ್ತರಿಗೂ ಕಳುಹಿಸಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಸೆಪ್ಟೆಂಬರ್ 24ರಂದು ಹಾಗೂ ಅಕ್ಟೋಬರ್ 4ರಂದು ಕೂಡ ಪತ್ರ ಬರೆದಿತ್ತು ಎಂಬುದನ್ನು ಪಟೋಲೆ ಅವರು ಉಲ್ಲೇಖಿಸಿದ್ದಾರೆ. 

ರಾಜ್ಯದಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡ ಹಿಂಸಾಚಾರ ಪ್ರಕರಣಗಳು ಕಳೆದ 20 ದಿನಗಳಲ್ಲಿ ಹೆಚ್ಚಳ ಕಂಡಿವೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಪಟೋಲೆ ಅವರು ದೂರಿದ್ದಾರೆ.

ರಶ್ಮಿ ಅವರು ತಾವು ಕಾಂಗ್ರೆಸ್, ಶಿವಸೇನಾ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷಗಳಿಗೆ ವಿರುದ್ಧವಾಗಿರುವುದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ ಎಂದು ಪಟೋಲೆ ಆರೋಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.