
ಪವನ್ ಖೇರಾ
ನವದೆಹಲಿ: ‘ಯುಪಿಐ ಪಾವತಿ ಕುರಿತ ಯೋಜನೆಯ ಆರಂಭಿಕ ಪರಿಕಲ್ಪನೆ ರೂಪುಗೊಂಡಿದ್ಡು 2012–13ರಲ್ಲಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ. ಆಗ ನರೇಂದ್ರ ಮೋದಿ ಅವರು ಇದಕ್ಕಾಗಿ ಯಾವುದೇ ಕೆಲಸ ಮಾಡಿರಲಿಲ್ಲ. ಇದೀಗ ಯೋಜನೆಯ ಯಶಸ್ಸಿನ ಎಲ್ಲ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ವಿದ್ಯಾರ್ಥಿಯೊಬ್ಬ ಬೇರೆ ಸಹಪಾಠಿ ಮಾಡಿದ ಪ್ರಾಜೆಕ್ಟ್ ತನ್ನದೇ ಎಂದು ಹೇಳಿಕೊಂಡು ಶ್ರೇಯ ಪಡೆಯುವ ಚಾಳಿ ಇದು’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು ಭಾರತದ ಯುಪಿಐ ಪಾವತಿ ವಿಧಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಗುರುವಾರ ಮಾತನಾಡಿದ್ದರು. ಅದರ ಮರುದಿನ ಕಾಂಗ್ರೆಸ್ ಅದಕ್ಕೆ ಪ್ರತಿಕ್ರಿಯಿಸಿದೆ.
‘ಪ್ರಧಾನಿ ಮೋದಿ ಅವರು, ರಿಬ್ಬನ್ ಕತ್ತರಿಸುವುದರಲ್ಲಿ ಮತ್ತು ಕಾಂಗ್ರೆಸ್ ಅನ್ನು ಶಪಿಸುವುದರಲ್ಲಿಯೇ ತೊಡಗಿದ್ದಾರೆ. ಅದರ ಜತೆಗೆ ‘ಕ್ರೆಡಿಟ್ ಕದಿಯುವುದು’ ಅವರ ಮತ್ತೊಂದು ಕಾರ್ಯವಿಧಾನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಎಕ್ಸ್’ನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ‘ನಮಗೆಲ್ಲ ನೆನಪಿರುವಂತೆ ಒಂದು ಗುಂಪು ಯೋಜನೆಯ ಸಹಪಾಠಿಯೊಬ್ಬರು ಅದಕ್ಕಾಗಿ ಯಾವುದೇ ಕೆಲಸ ಮಾಡಲಿಲ್ಲ. ಬದಲಿಗೆ ಅದರ ಎಲ್ಲ ಲಾಭ ಪಡೆಯಲು ಉತ್ಸುಕರಾಗಿದ್ದಾರೆ. ಅವರೇ ನರೇಂದ್ರ ಮೋದಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.