ADVERTISEMENT

ಕೆಮ್ಮಿನ ಸಿರಪ್‌ ಸೇವನೆಯಿಂದ ಮಕ್ಕಳ ಸಾವು: ಪ್ರಧಾನಿ ಕ್ಷಮೆಗೆ ಕಾಂಗ್ರೆಸ್ ಒತ್ತಾಯ

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ

ಪಿಟಿಐ
Published 7 ಅಕ್ಟೋಬರ್ 2025, 15:34 IST
Last Updated 7 ಅಕ್ಟೋಬರ್ 2025, 15:34 IST
<div class="paragraphs"><p>ಕೆಮ್ಮಿನ ಸಿರಪ್</p></div>

ಕೆಮ್ಮಿನ ಸಿರಪ್

   

(ಐಸ್ಟೋಕ್ ಚಿತ್ರ)

ನವದೆಹಲಿ: ಕೆಮ್ಮಿನ ಸಿರಪ್‌ ಸೇವನೆಯಿಂದ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮಕ್ಕಳು ಮೃತಪಟ್ಟ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್‌ ಮಂಗಳವಾರ ಆಗ್ರಹಿಸಿದೆ.

ADVERTISEMENT

ಮೃತ ಮಕ್ಕಳ ಕುಟುಂಬ ವರ್ಗಕ್ಕೆ ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ ನೀಡಬೇಕು. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುವ ಕೆಮ್ಮಿನ ಸಿರಪ್‌ ತಯಾರಿಸಿದ ಕಂಪನಿಗಳಿಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ‘ಕ್ಲೀನ್‌ ಚಿಟ್‌’ ನೀಡಿವೆ ಎಂದು ಆರೋಪಿಸಿದೆ.

‘ಛಿಂದ್ವಾಢದ ಕಾಂಗ್ರೆಸ್‌ ಶಾಸಕರು ಕೆಮ್ಮಿನ ಸಿರಪ್‌ ಬಗ್ಗೆ ಆತಂಕ ವ್ಯಕ್ತಪಡಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ವಿನಂತಿಸಿದ್ದರೂ, ಯಾವುದೇ ಕ್ರಮ ಜರುಗಿಸಿರಲಿಲ್ಲ’ ಎಂದು ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉಮಂಗ್‌ ಸಿಂಘಾರ್ ಅವರು ರಾಜಸ್ಥಾನ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಟಿಕಾ ರಾಮ್ ಜೂಲಿ ಅವರೊಂದಿಗೆ ಇಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಮಧ್ಯಪ್ರದೇಶದ ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಅವರು ಕೆಮ್ಮಿನ ಸಿರಪ್‌ ಸೇವನೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದಿದ್ದು, ಸಿರಪ್‌ ತಯಾರಿಸುವ ಕಂಪನಿಗೆ ಕ್ಲೀನ್‌ ಚಿಟ್‌ ನೀಡಿದ್ದರು. ಉಪಮುಖ್ಯಮಂತ್ರಿಗೂ, ಔಷಧ ಕಂಪನಿಗೂ ಏನು ಸಂಬಂಧ? ಸಚಿವರು ಈ ಕಂಪನಿಯ ಪಾಲುದಾರರೇ?’ ಎಂದು ಉಮಂಗ್‌ ವಾಗ್ದಾಳಿ ನಡೆಸಿದರು.

‘ರಾಜಸ್ಥಾನ, ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಸೂತ್ರದ ಬೊಂಬೆ’ ಎಂದು ದೂರಿದ ಅವರು, ‘ದೆಹಲಿಯಿಂದ ಬರುವ ಸೂಚನೆಗಳನ್ನಷ್ಟೇ ಪಾಲಿಸುತ್ತಾರೆ. ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಮಾನವೀಯತೆ ಇದೆಯಾ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.