ADVERTISEMENT

ವೋಟ್‌ ಬ್ಯಾಂಕ್‌ ಜತೆ ನೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿರುವ ಬಿಜೆಪಿ: ಸಿಬಲ್‌

ಏಜೆನ್ಸೀಸ್
Published 10 ಫೆಬ್ರುವರಿ 2021, 9:36 IST
Last Updated 10 ಫೆಬ್ರುವರಿ 2021, 9:36 IST
ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಮಾತನಾಡಿದರು.
ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಮಾತನಾಡಿದರು.   

ನವದೆಹಲಿ: ‘ಕೃಷಿ ಕಾನೂನುಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ 4–5 ಮಂದಿ ದೊಡ್ಡವರು ಎಲ್ಲವನ್ನೂ ಹೊಂದಿದ್ದಾರೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ಕಳೆದ 5 ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯನ್ನು ದುರುಪಯೋಗಪಡಿಸಿಕೊಂಡಿದೆ’ ಎಂದು ಸಿಬಲ್‌ ಆರೋಪಿಸಿದ್ದಾರೆ.

2018 ರಲ್ಲಿ ಭಾರತೀಯ ಜನಸಂಖ್ಯೆಯ ಶೇ 1ರಷ್ಟು ಜನರು ಶೇ 58ರಷ್ಟು ಆಸ್ತಿಯನ್ನು ಹೊಂದಿದ್ದರು. 2019 ರಲ್ಲಿ ಶೇ 1ರಷ್ಟು ಜನರು ಶೇ 73ರಷ್ಟು ಒಡೆತನವನ್ನು ಹೊಂದಿದ್ದಾರೆ. ಇದು ಬಂಡವಾಳಶಾಹಿ ಸರ್ಕಾರದ ಶ್ರೇಷ್ಠ ಸಾಧನೆಯಾಗಿದೆ. ದೇಶದ ಸಂಪತ್ತು ಎಲ್ಲಿಗೆ ಹೋಗುತ್ತಿದೆ? ಸಿಬಲ್‌ ಪ್ರಶ್ನಿಸಿದ್ದಾರೆ.

ADVERTISEMENT

ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸಲು ಏನು ಮಾಡಿದ್ದೀರಿ? ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ಎಂಎನ್‌ಆರ್‌ಇಜಿಎ) ಶೇ 35ರಷ್ಟು ಅನುದಾನ ಯಾಕೆ ಕಡಿಮೆ ಮಾಡಿದ್ದೀರಿ? ಎಂದು ಸಿಬಲ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣವನ್ನು ಮಾಡಿದೆ ಎಂದು ನೀವು ಹೇಳುತ್ತೀರಿ. ಬಿಜೆಪಿ ಏನು ಮಾಡಿದೆ? ಅಸ್ಸಾಂ, ಕೇರಳ, ತಮಿಳುನಾಡಿಗೆ ಹೆಚ್ಚು ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬಿಜೆಪಿ ವೋಟ್‌ ಬ್ಯಾಂಕ್‌ ರಾಜಕಾರಣದ ಜತೆಗೆ ನೋಟ್‌ ಬ್ಯಾಂಕ್‌ ರಾಜಕಾರಣವನ್ನು ಮಾಡುತ್ತಿದೆ ಎಂದು ಸಿಬಲ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.