ADVERTISEMENT

ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶಕ್ಕೆ ಅನುದಾನ ಕಡಿತಗೊಳಿಸಿದ್ದೇಕೆ?: ಖರ್ಗೆ

ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸು– ಅಶ್ವಿನಿ ವೈಷ್ಣವ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:06 IST
Last Updated 4 ಜೂನ್ 2023, 16:06 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ (ಪಿಟಿಐ):‘ರಾಷ್ಟ್ರೀಯ ರೈಲು ಸಂರಕ್ಷಣಾ ಕೋಶ (ಆರ್‌ಆರ್‌ಎಸ್‌ಕೆ)ಕ್ಕೆ ನೀಡುವ ಅನುದಾನದಲ್ಲಿ ಶೇ 79ರಷ್ಟು ಕಡಿತಗೊಳಿಸಲಾಗಿದೆ ಎಂದು ಸಿಎಜಿ ವರದಿ ಹೇಳುತ್ತದೆ. ಇಷ್ಟೊಂದು ಪ್ರಮಾಣದ ಅನುದಾನ ಕಡಿತ ಮಾಡಿದ್ದು ಏಕೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಪ್ರಶ್ನಿಸಿದ್ದಾರೆ.

‘ಆರ್‌ಆರ್‌ಎಸ್‌ಕೆಗೆ ಪ್ರತಿ ವರ್ಷ ₹20 ಸಾವಿರ ಕೋಟಿ ಅನುದಾನ ಒದಗಿಸಬೇಕು. ಆದರೆ ಕಡಿಮೆ ಮಾಡಲಾಗಿದೆ. ಹಳಿಗಳ ನವೀಕರಣ ಕಾಮಗಾರಿಗೆ ನೀಡುವ ಅನುದಾನವನ್ನು ಕಡಿಮೆ ಮಾಡಿದ್ದು ಏಕೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ‘ಪ್ರಧಾನಿ ಮೋದಿ ಅವರೇ ನೀವು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರುವುದರಲ್ಲಿ ತೊಡಗಿದ್ದೀರಿ. ಅವುಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಆದರೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಪರೋಕ್ಷವಾಗಿ ವಂದೇ ಭಾರತ್ ರೈಲುಗಳನ್ನು ಪ್ರಸ್ತಾಪಿಸಿ ಟೀಕಿಸಿದ್ದಾರೆ. ‘ರೈಲ್ವೆ ಸುರಕ್ಷತಾ ಆಯೋಗ (ಸಿಆರ್‌ಎಸ್‌)ದ ಶಿಫಾರಸುಗಳನ್ನು ರೈಲ್ವೆ ಮಂಡಳಿ ನಿರ್ಲಕ್ಷಿಸುತ್ತಿರುವ ಕುರಿತು ಸಂಸದೀಯ ಸ್ಥಾಯಿ ಸಮಿತಿ ತನ್ನ 323ನೇ ವರದಿಯಲ್ಲಿ ಟೀಕಿಸಿದೆ. ದೇಶದಲ್ಲಿ ಸಂಭವಿಸುವ ಅಪಘಾತಗಳ ಪೈಕಿ ಶೇ 8–10 ಅವಘಡಗಳ ಬಗ್ಗೆ ಮಾತ್ರ ಸಿಆರ್‌ಎಸ್‌ ತನಿಖೆ ನಡೆಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗಾಗಿ ಸಿಆರ್‌ಎಸ್‌ ಅನ್ನು ಯಾಕೆ ಬಲಪಡಿಸಿಲ್ಲ’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಎನ್‌ಸಿಪಿ ಟೀಕೆ: ‘ರೈಲು ಅಪಘಾತಗಳನ್ನು ತಡೆಯುವ ಸಲುವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಿಎಜಿ ಕಳೆದ ವರ್ಷದ ತನ್ನ ವರದಿಯಲ್ಲಿ ಕೆಲ ಸಲಹೆಗಳನ್ನು ನೀಡಿತ್ತು. ಆ ಸಲಹೆಗಳನ್ನು ಪಾಲನೆ ಮಾಡದ ಕಾರಣ ಅಪಘಾತ ಸಂಭವಿಸಿದೆ ಎಂಬುದು ಸ್ಪಷ್ಟವಾಗುತ್ತಿದೆ’ ಎಂದು ಎನ್‌ಸಿಪಿ ವಕ್ತಾರ ಕ್ಲಾಯ್ಡ್‌ ಕ್ರಾಸ್ಟೊ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಅಪಘಾತಕ್ಕೀಡಾದ ರೈಲುಗಳಲ್ಲಿದ್ದ ಪ್ರಯಾಣಿಕರ ಫೋಟೊಗಳನ್ನು ಬಾಲಸೋರ್‌ನ ಎನ್‌ಒಸಿಸಿಐ ಬ್ಯುಸಿನೆಸ್‌ ಪಾರ್ಕ್‌ನಲ್ಲಿ ಭಾನುವಾರ ಇಡಲಾಗಿತ್ತು. ಪ್ರಯಾಣಿಕರ ಸಂಬಂಧಿಗಳು ತಮ್ಮವರ ಗುರುತು ಪತ್ತೆಗೆ ಮುಂದಾಗಿದ್ದು ಕಂಡುಬಂತು –ಪಿಟಿಐ ಚಿತ್ರ
ಅಶ್ವಿನಿ ವೈಷ್ಣವ್
ಹಳಿಗಳನ್ನು ಮರುಸ್ಥಾಪಿಸುವ ಕಾರ್ಯ ಭರದಿಂದ ಸಾಗಿದ್ದು ಮಂಗಳವಾರದ ವೇಳೆ ಈ ಮಾರ್ಗವು ರೈಲುಗಳ ಸಂಚಾರಕ್ಕೆ ಮುಕ್ತವಾಗಲಿದೆ
ಧರ್ಮೇಂದ್ರ ಪ್ರಧಾನ್ ಕೇಂದ್ರ ಸಚಿವ
ರೈಲ್ವೆಯಲ್ಲಿ ಹುದ್ದೆಗಳು ಖಾಲಿ ಇವೆ. ಪ್ರಮುಖ ವಿಭಾಗಗಳಿಗೆ ಅನುದಾನದ ಕೊರತೆ ಇದೆ. ಈ ವಿಚಾರಕ್ಕೆ ಸಂಬಂಧಿಸಿ ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ?
ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ನವೀನ್‌ ಪಟ್ನಾಯಕ್‌ –ಪ್ರಧಾನಿ ಮಾತುಕತೆ

ಪ್ರಧಾನಿ ಜೊತೆ ಪಟ್ನಾಯಕ್‌ ಮಾತುಕತೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಪಘಾತದ ಬಳಿಕ ಕೈಗೊಂಡ ರಕ್ಷಣಾ ಕಾರ್ಯ ಸೇರಿದಂತೆ ವಸ್ತುಸ್ಥಿತಿ ಕುರಿತು ಮಾಹಿತಿ ನೀಡಿದರು. ‘ವೈದ್ಯರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಇತರ ಸಿಬ್ಬಂದಿ ಅದ್ಭುತ ಕಾರ್ಯ ಮಾಡುತ್ತಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಉತ್ತಮ ಚಿಕಿತ್ಸೆ ನೀಡುವ ಮೂಲಕ ಅವರ ಜೀವ ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ. ‘ಈ ಸಂಕಷ್ಟ ಸಮಯದಲ್ಲಿ ಪರಿಣಾಮಕಾರಿ ಹಾಗೂ ತತ್‌ಕ್ಷಣದ ಕ್ರಮ ಕೈಗೊಂಡಿದ್ದಾಗಿ ಪಟ್ನಾಯಕ್‌ ಅವರನ್ನು ಪ್ರಧಾನಿ ಅಭಿನಂದಿಸಿದರು. ಕೇಂದ್ರವು ಅಗತ್ಯ ನೆರವು ನೀಡಲಿದೆ ಎಂಬ ಭರವಸೆ ನೀಡಿದರು’ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ADVERTISEMENT

₹5 ಲಕ್ಷ ಪರಿಹಾರ: ಮುಖ್ಯಮಂತ್ರಿ ಪಟ್ನಾಯಕ್‌ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ವಿದೇಶಿ ಗಣ್ಯರ ಸಂತಾಪ

ವಿದೇಶಿ ಗಣ್ಯರ ಶೋಕ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಹಲವಾರು ವಿದೇಶಿ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ‘ರೈಲು ಅಪಘಾತದಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದು ಅನೇಕರು ಗಾಯಗೊಂಡಿರುವುದು ಅತೀವ ದುಃಖ ತಂದಿದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರೂ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.