ADVERTISEMENT

ಕೇಂದ್ರದ 90 ಕಾರ್ಯದರ್ಶಿಗಳ ಪೈಕಿ 3 ಮಂದಿ ಮಾತ್ರ ಒಬಿಸಿಗೆ ಸೇರಿದ್ದಾರೆ: ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2023, 11:04 IST
Last Updated 2 ಅಕ್ಟೋಬರ್ 2023, 11:04 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಬಿಹಾರ ಸರ್ಕಾರ ನಡೆಸಿದ್ದ ಜಾತಿವಾರು ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದರನ್ವಯ ಬಿಹಾರದಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಬಿಸಿ) ಜನರು ಶೇಕಡ 63ರಷ್ಟು ಇದ್ದಾರೆ ಎಂಬುದು ತಿಳಿದು ಬಂದಿದೆ.

ಜಾತಿವಾರು ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿರುವ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

‘ಬಿಹಾರದ ಜಾತಿ ಗಣತಿ ಅನ್ವಯ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರು ಶೇಕಡ 84ರಷ್ಟು ಇದ್ದಾರೆ ಎಂಬುದು ಗೊತ್ತಾಗಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಕೇವಲ 3 ಮಂದಿ ಮಾತ್ರ ಒಬಿಸಿಗೆ ಸೇರಿದವರಾಗಿದ್ದಾರೆ. ಅವರು ಭಾರತದ ಬಜೆಟ್‌ನ ಶೇ 5ರಷ್ಟನ್ನು ಮಾತ್ರ ನಿಭಾಯಿಸುತ್ತಾರೆ. ಆದ್ದರಿಂದ ದೇಶದ ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕುಗಳು –ಇದು ನಮ್ಮ ಪ್ರತಿಜ್ಞೆ’ ಎಂದು ರಾಹುಲ್ ಬರೆದುಕೊಂಡಿದ್ದಾರೆ.

ADVERTISEMENT

ಬಿಹಾರದಲ್ಲಿ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಜನರು ಶೇಕಡ 27.13ರಷ್ಟು, ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಜನರು ಶೇಕಡ 36.01ರಷ್ಟಿದ್ದರೆ, ಸಾಮಾನ್ಯ ವರ್ಗದ ಜನರು ಶೇಕಡ 15.52ರಷ್ಟಿದ್ದಾರೆ ಎಂದು ವರದಿ ಬಿಡುಗಡೆ ಮಾಡಿದ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಹೇಳಿದ್ದಾರೆ. ಬಿಹಾರದಲ್ಲಿ 13.07 ಕೋಟಿ ಜನಸಂಖ್ಯೆ ಇದೆ ಎಂದು ಈ ಸಮೀಕ್ಷೆಯ ವರದಿ ತಿಳಿಸಿದೆ.

ಒಬಿಸಿಯಲ್ಲಿ ಬರುವ ಯಾದವ ಸಮುದಾಯದ ಜನಸಂಖ್ಯೆ ಅತಿ ಹೆಚ್ಚಾಗಿದ್ದು, ಒಟ್ಟು ಶೇಕಡ 14.27ರಷ್ಟು ಯಾದವ ಸಮುದಾಯದ ಜನರು ಬಿಹಾರದಲ್ಲಿದ್ದಾರೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಹ ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಗಮನಾರ್ಹವೆಂದರೆ, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಗಣತಿಯ ಭಾಗವಾಗಿ ಎಸ್‌ಸಿ ಮತ್ತು ಎಸ್‌ಟಿ ಹೊರತುಪಡಿಸಿ ಇತರೆ ಜಾತಿಗಳ ಎಣಿಕೆ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಬಿಹಾರ ಸರ್ಕಾರವು ಜಾತಿವಾರು ಸಮೀಕ್ಷೆಗೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.