ADVERTISEMENT

‌ಲಖಿಂಪುರದತ್ತ ಕಾಂಗ್ರೆಸ್ ಮುಖಂಡರು: ರಾಹುಲ್, ಪ್ರಿಯಾಂಕಾ ಪ್ರವೇಶಕ್ಕೆ ಅನುಮತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2021, 7:55 IST
Last Updated 6 ಅಕ್ಟೋಬರ್ 2021, 7:55 IST
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ
ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ   

ನವದೆಹಲಿ: ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಎಸ್‌ಯುವಿ ಹರಿದು ನಾಲ್ವರ ರೈತರು ಮೃತಪಟ್ಟ ನಂತರ ಲಖಿಂಪುರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ನಿಷೇಧಾಜ್ಞೆ ವಿಧಿಸಲಾಗಿದೆ. ಈ ನಡುವೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿ ಮಾಡಲು ಲಖನೌಗೆ ತೆರಳಿದ್ದಾರೆ. ಆದರೆ, ರಾಹುಲ್‌ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಲಖನೌ ಪೊಲೀಸರು ಹೇಳಿದ್ದರು.

ರಾಹುಲ್‌ ಗಾಂಧಿ, ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಚನ್ನಿ ಅವರು ನವದೆಹಲಿಯಿಂದ ಲಖನೌಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಲಖಿಂಪುರ ಖೇರಿಗೆ ಭೇಟಿ ನೀಡಲು ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರೆ ಮೂವರು ಮುಖಂಡರಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿರುವುದಾಗಿ ಅಲ್ಲಿನ ಗೃಹ ಇಲಾಖೆ ತಿಳಿಸಿದೆ.

ಸೋಮವಾರ ಸೀತಾಪುರಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.

ADVERTISEMENT

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶದ ಸಚಿವ ಸಿದ್ಧಾರ್ಥ್‌ ನಾಥ್‌ ಸಿಂಗ್‌ 'ಪರಿಸ್ಥಿತಿಯು ನಿಯಂತ್ರಣಕ್ಕೆ ಬರಲಿ ಹಾಗೂ ಶವಗಳ ಅಂತಿಮ ಸಂಸ್ಕಾರ ಪೂರ್ಣಗೊಳ್ಳಲಿ. ಈ ಎಲ್ಲವೂ ಆಗುತ್ತಿದ್ದಂತೆ, ನಾವು ಅವರನ್ನು (ರಾಜಕೀಯ ಮುಖಂಡರಿಗೆ) ಅಲ್ಲಿಗೆ (ಲಖಿಂಪುರ–ಖೇರಿಗೆ) ಹೋಗಲು ಅವಕಾಶ ನೀಡುತ್ತೇವೆ... ' ಎಂದಿದ್ದರು.

ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಹಾಗೂ ಇತರ ಹಲವು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ಇಂದು ದೆಹಲಿಯ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.