ADVERTISEMENT

ಭಿನ್ನಮತೀಯರಿಗೆ ಬಿಜೆಪಿ ನಂಟಿದೆ ಎಂದ ರಾಹುಲ್ ಗಾಂಧಿ: ಕಪಿಲ್ ಸಿಬಲ್ ಅಸಮಾಧಾನ

ಏಜೆನ್ಸೀಸ್
Published 24 ಆಗಸ್ಟ್ 2020, 8:05 IST
Last Updated 24 ಆಗಸ್ಟ್ 2020, 8:05 IST
ರಾಹುಲ್ ಗಾಂಧಿ ಮತ್ತು ಕಪಿಲ್ ಸಿಬಲ್
ರಾಹುಲ್ ಗಾಂಧಿ ಮತ್ತು ಕಪಿಲ್ ಸಿಬಲ್   

ನವದೆಹಲಿ: ಪಕ್ಷದ ನಾಯಕತ್ವದಲ್ಲಿ ಸುಧಾರಣೆಯಾಗಬೇಕು ಎಂದು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವವರಿಗೆ ಬಿಜೆಪಿ ಸಹಕಾರವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ನಾಯಕರು ಪತ್ರ ಬರೆದಿರುವ ಬಗ್ಗೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಅಸಮಾಧಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಅದನ್ನು ಬರೆದಿರುವ ಸಂದರ್ಭದ ಬಗ್ಗೆಯೂ ಪ್ರಶ್ನಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಪತ್ರ ಬರೆಯಲಾಗಿದೆ. ಪತ್ರದಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಚರ್ಚಿಸಲು ಸರಿಯಾದ ವೇದಿಕೆ ಕಾರ್ಯಕಾರಿ ಸಮಿತಿ ಸಭೆಯೇ ಹೊರತು ಮಾಧ್ಯಮವಲ್ಲ ಎಂದೂ ಹೇಳಿದ್ದಾರೆ.

ಕಪಿಲ್ ಸಿಬಲ್ ಅಸಮಾಧಾನ: ರಾಹುಲ್ ಗಾಂಧಿ ಹೇಳಿಕೆಗೆ ಕಪಿಲ್ ಸಿಬಲ್ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ‘ನಾವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ರಾಜಸ್ಥಾನ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಮಣಿಪುರದಲ್ಲಿ ಬಿಜೆಪಿಯನ್ನು ಮಣಿಸಿ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಪರ ಹೇಳಿಕೆ ನೀಡಿಲ್ಲ. ಆದಾಗ್ಯೂ, ನಾವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ!’ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.