ADVERTISEMENT

ನರೇಗಾ ಮರು ಜಾರಿಗೆ ಕಾಂಗ್ರೆಸ್ ಸಂಗ್ರಾಮ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 4 ಜನವರಿ 2026, 1:36 IST
Last Updated 4 ಜನವರಿ 2026, 1:36 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ&nbsp;</p></div>

ಮಲ್ಲಿಕಾರ್ಜುನ ಖರ್ಗೆ 

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶವನ್ನು ವಿಕಸಿತ ಭಾರತದ ಬದಲಾಗಿ ವಿನಾಶ ಭಾರತ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷವು, ಯುಪಿಎ ಅವಧಿಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನನ್ನು ಮರು ಸ್ಥಾಪಿಸಲು ಒತ್ತಾಯಿಸಿ ಜನವರಿ 10ರಿಂದ 45 ದಿನಗಳ ‘ಮನರೇಗಾ ಬಚಾವೋ ಸಂಗ್ರಾಮ’ ನಡೆಸುವುದಾಗಿ ಶನಿವಾರ ಪ್ರಕಟಿಸಿದೆ. 

ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳಲ್ಲಿ ‘ವಿಬಿ–ಜಿ ರಾಮ್‌ ಜಿ’ ಕಾಯ್ದೆಯನ್ನು ಜಾರಿಗೊಳಿಸದಿರುವುದು ಸೇರಿದಂತೆ ಎಲ್ಲ ಆಯ್ಕೆಗಳನ್ನು ಅನ್ವೇಷಿಸುವುದಾಗಿ ಪಕ್ಷ ತಿಳಿಸಿದೆ. ಮನರೇಗಾ ರದ್ದುಗೊಳಿಸಿರುವ ಕೇಂದ್ರದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಲು ಉಳಿದ ಎಲ್ಲ ವಿಪಕ್ಷಗಳನ್ನು ಸಂಪರ್ಕಿಸುವುದಾಗಿ ಪಕ್ಷ ಹೇಳಿದೆ. 

ADVERTISEMENT

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌, ‘ಮನರೇಗಾ ಅತ್ಯಂತ ವಿಕೇಂದ್ರೀಕೃತ ಯೋಜನೆ. ಆದರೆ, ಹೊಸ ಕಾಯ್ದೆಯ ಮೂಲಕ ಪಂಚಾಯಿತಿಗಳನ್ನು ಗುಮಾಸ್ತರ ಸ್ಥಾನಕ್ಕೆ ಇಳಿಸಲಾಗಿದೆ. ಕೇಂದ್ರ ಸರ್ಕಾರವೇ ಈಗ ಎಲ್ಲವನ್ನೂ ನಿರ್ಧರಿಸುತ್ತದೆ’ ಎಂದರು. 

ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಸ್ತುತ ಕಾನೂನನ್ನು ಜಾರಿಗೆ ತರುವುದು ಅಸಾಧ್ಯ ಮತ್ತು ಜನ ವಿರೋಧಿ ಕಾನೂನನ್ನು ತಡೆಯಲು ಎಲ್ಲ ಸಾಧ್ಯತೆಗಳನ್ನು ಹುಡುಕುತ್ತೇವೆ’ ಎಂದರು. 

ಹೊಸ ಕಾಯ್ದೆಯನ್ನು ಎಲ್ಲ ವಿಪಕ್ಷಗಳು ವಿರೋಧಿಸಿವೆ. ಕಾಂಗ್ರೆಸ್ ನಾಯಕತ್ವವು ಶೀಘ್ರದಲ್ಲೇ ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನಾಯಕರೊಂದಿಗೆ ಚರ್ಚಿಸಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ‘ಹೊಸ ಕಾನೂನಿನಲ್ಲಿ ಕೇಂದ್ರೀಕರಣ ಮಾತ್ರ ಖಾತರಿ. ಈ ಯೋಜನೆಯನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಕಾರ್ಯಗತಗೊಳಿಸಬೇಕು ಎಂಬುದನ್ನು ಕೇಂದ್ರ ನಿರ್ಧರಿಸುತ್ತದೆ’ ಎಂದರು. 

‘ಬಿಜೆಪಿಯ ನೀತಿ ವಿಕಸಿತ ಭಾರತ ಅಲ್ಲ, ವಿನಾಶ ಭಾರತ. ನಾವು ಹೊಸ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸುತ್ತಿಲ್ಲ. ಮನರೇಗಾ ಮರುಸ್ಥಾಪನೆಗೆ ನಾವು ಒತ್ತಾಯಿಸುತ್ತಿದ್ದೇವೆ’ ಎಂದು ಅವರು ಹೇಳಿದರು. 

ಈಗ ರದ್ದುಗೊಂಡಿರುವ ಮೂರು ಕೃಷಿ ಕಾಯ್ದೆಗಳಿಗಾದ ಗತಿಯೇ ಹೊಸ ಕಾಯ್ದೆಗೂ ಆಗಲಿದೆ ಎಂದು ಎಚ್ಚರಿಸಿದ ಅವರು, ಮನರೇಗಾ ಪ್ರತಿಭಟನೆಗಳು ದೆಹಲಿ ಕೇಂದ್ರಿತವಾಗಿದ್ದ ರೈತರ ಪ್ರತಿಭಟನೆಗಿಂತ ಭಿನ್ನವಾಗಿ ವಿಕೇಂದ್ರೀಕೃತಗೊಳ್ಳಲಿವೆ. ಹೊಸ ಕಾನೂನನ್ನು ನ್ಯಾಯಾಲಯಗಳಲ್ಲಿಯೂ ಪ್ರಶ್ನಿಸಲಾಗುವುದು ಎಂದು ಅವರು ತಿಳಿಸಿದರು. 

ದುಡಿಯುವ ಹಕ್ಕು ಕಸಿಯಲು ಜಿ ರಾಮ್‌ ಜಿ ಜಾರಿ: ಖರ್ಗೆ

'ಕಾರ್ಮಿಕರ ದುಡಿಮೆ ಹಕ್ಕನ್ನು ಕಸಿಯುವುದಕ್ಕಾಗಿಯೇ ಕೇಂದ್ರ ಸರ್ಕಾರ ವಿಬಿ–ಜಿ ರಾಮ್‌ ಜಿ’ ಕಾಯ್ದೆ ಜಾರಿಗೆ ತಂದಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಟೀಕಿಸಿದ್ದಾರೆ.

‘ಹೊಸ ಕಾಯ್ದೆ ಜಾರಿಗೊಳಿಸಿರುವ ಕೇಂದ್ರದ ಈ ನಡೆ ನರೇಗಾ ಮೇಲಿನ ದಾಳಿ. ಇದು ಸಂವಿಧಾನವು ಕಾರ್ಮಿಕರಿಗೆ ನೀಡಿರುವ ದುಡಿಯುವ ಹಕ್ಕು ಹಾಗೂ ಕೋಟ್ಯಂತರ ಜನ ಕಾರ್ಮಿಕರ ಮೇಲಿನ ದಾಳಿಗೆ ಸಮ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಈ ವಿಚಾರವಾಗಿ ಪಕ್ಷವು ಮೂರು ಬೇಡಿಕೆಗಳನ್ನು ಮುಂದಿಡುತ್ತದೆ. ಜಿ ರಾಮ್‌ ಜಿ ಕಾಯ್ದೆಯನ್ನು ಹಿಂಪಡೆದು ನರೇಗಾ ಕಾಯ್ದೆಯನ್ನು ಪುನಃ ಜಾರಿಗೊಳಿಸಬೇಕು ಎಂಬುದು ಮೊದಲ ಬೇಡಿಕೆ. ದುಡಿಮೆಯ ಹಕ್ಕು ಹಾಗೂ ಪಂಚಾಯಿತಿಗಳಿಗೆ ಇರುವ ಅಧಿಕಾರವನ್ನು ಮರುಸ್ಥಾಪಿಸಬೇಕು ಎಂಬುದು ಇತರ ಬೇಡಿಕೆಗಳಾಗಿವೆ’ ಎಂದು ಖರ್ಗೆ ಹೇಳಿದ್ದಾರೆ.

ಹೋರಾಟದ ಸ್ವರೂಪ

* ಜನವರಿ 10ರಂದು ಜಿಲ್ಲಾ ಮಟ್ಟದಲ್ಲಿ ಪತ್ರಿಕಾಗೋಷ್ಠಿಗಳೊಂದಿಗೆ ಆಂದೋಲನ ಆರಂಭವಾಗಲಿದ್ದು, ನಂತರ ಜಿಲ್ಲಾ ಕೇಂದ್ರಗಳಲ್ಲಿ ಅಥವಾ ಗಾಂಧಿ ಅಥವಾ ಅಂಬೇಡ್ಕರ್ ಪ್ರತಿಮೆಗಳ ಬಳಿ ಒಂದು ದಿನದ ಉಪವಾಸ ನಡೆಯಲಿದೆ. 

* ಜನವರಿ 12 ಮತ್ತು 30ರ ನಡುವೆ ಎರಡನೇ ಹಂತದ ಹೋರಾಟ ನಡೆಯಲಿದ್ದು,  ಪಂಚಾಯಿತಿ ಮಟ್ಟದ ಸಭೆಗಳು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದ ಮನರೇಗಾ ಕಾರ್ಮಿಕರು ಮತ್ತು ಗ್ರಾಮ ಪ್ರಧಾನ್‌ಗಳಿಗೆ ಪತ್ರಗಳ ವಿತರಣೆ, ವಿಧಾನಸಭಾ ಮಟ್ಟದ ಸಭೆಗಳು ಜರುಗಲಿವೆ.  ಮಹಾತ್ಮ ಗಾಂಧಿಯವರ ಪುಣ್ಯ ತಿಥಿಯ ದಿನವಾದ ಜನವರಿ 30ರಂದು ವಾರ್ಡ್ ಮಟ್ಟದಲ್ಲಿ ಶಾಂತಿಯುತ ಧರಣಿ ನಡೆಯಲಿದೆ. 

* ಮೂರನೇ ಹಂತದ ಹೋರಾಟ ಜನವರಿ 31ರಿಂದ ಫೆಬ್ರುವರಿ 25ರ ನಡುವೆ ಜರುಗಲಿದೆ. ಫೆಬ್ರುವರಿ 6 ರವರೆಗೆ ಜಿಲ್ಲಾ ಮಟ್ಟದಲ್ಲಿ ಧರಣಿ ಮತ್ತು ಫೆಬ್ರುವರಿ 7 ರಿಂದ 15 ರವರೆಗೆ ವಿಧಾನಸಭೆ ಅಥವಾ ರಾಜಭವನ ಅಥವಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ನಡೆಯಲಿದೆ. ಫೆಬ್ರುವರಿ 16 ರಿಂದ 25 ರ ನಡುವೆ ದೇಶದಾದ್ಯಂತ ನಾಲ್ಕು ರ‍್ಯಾಲಿಗಳನ್ನು ಕಾಂಗ್ರೆಸ್ ಆಯೋಜಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.