ADVERTISEMENT

ವಯನಾಡ್: ಹುಲಿ ದಾಳಿಗೆ ಬಲಿಯಾದ ಮಹಿಳೆಯ ಕುಟುಂಬಸ್ಥರನ್ನು ಭೇಟಿಯಾದ ಪ್ರಿಯಾಂಕಾ

ಪಿಟಿಐ
Published 28 ಜನವರಿ 2025, 9:31 IST
Last Updated 28 ಜನವರಿ 2025, 9:31 IST
<div class="paragraphs"><p>ಪ್ರಿಯಾಂಕಾ ಗಾಂಧಿ ವಾದ್ರಾ</p></div>

ಪ್ರಿಯಾಂಕಾ ಗಾಂಧಿ ವಾದ್ರಾ

   

-ಪಿಟಿಐ ಚಿತ್ರ

ವಯನಾಡ್ (ಕೇರಳ): ಇತ್ತೀಚೆಗೆ ವಯನಾಡ್‌ನಲ್ಲಿ ಹುಲಿ ದಾಳಿಗೆ ಬಲಿಯಾದ ಮಹಿಳೆಯ (ರಾಧಾ) ಕುಟುಂಬಸ್ಥರನ್ನು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಮಂಗಳವಾರ) ಭೇಟಿ ಮಾಡಿದರು.

ADVERTISEMENT

ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಬಳಿಕ ರಸ್ತೆ ಮೂಲಕ ವಯನಾಡ್‌ಗೆ ಪ್ರಯಾಣ ಬೆಳೆಸಿದರು. ಮಧ್ಯಾಹ್ನ 1.15 ರ ಸುಮಾರಿಗೆ ಮೃತ ಮಹಿಳೆಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಘಟನೆಯ ಹಿನ್ನೆಲೆ

ಜನವರಿ 24 ರಂದು ಇಲ್ಲಿನ ಮಾನಂತವಾಡಿ ಗ್ರಾಮದ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಕಾಫಿ ಕೊಯ್ಯಲು ಹೊರಟಿದ್ದ ರಾಧಾ ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದರು. ಘಟನೆ ನಡೆದ ಕೂಡಲೇ ಸ್ಥಳೀಯರು ಪ್ರತಿಭಟಿಸಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವುದನ್ನು ತಡೆದಿದ್ದರು. ಬಳಿಕ ಘಟನಾ ಸ್ಥಳಕ್ಕೆ ಧಾವಿಸಿದ್ದ ಅಧಿಕಾರಿಗಳು ಹುಲಿಯನ್ನು ಸೆರೆಹಿಡಿಯಲಾಗುವುದು ಅಥವಾ ಕೊಲ್ಲಲಾಗುವುದು ಎಂದು ಭರವಸೆ ನೀಡಿದ್ದರು.

ಬಟ್ಟೆಯ ತುಂಡು, ಕಿವಿ ಓಲೆ ಪತ್ತೆ:

ಬಳಿಕ ‌ಹುಲಿಯ ಕಳೇಬರ ಸೋಮವಾರ(ಜ.27) ಬೆಳಗಿನ ಜಾವ ವಯನಾಡ್‌ನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು. ಕಳೇಬರದ ‍ಪರೀಕ್ಷೆಯ ವೇಳೆ ಹುಲಿಯ ಹೊಟ್ಟೆಯಲ್ಲಿ ರಾಧಾ ಅವರ ಕೂದಲು, ಬಟ್ಟೆಯ ತುಂಡು ಹಾಗೂ ಕಿವಿ ಓಲೆಗಳು ಕಂಡುಬಂದಿವೆ. ಮತ್ತೊಂದು ಹುಲಿಯೊಂದಿಗೆ ಗಲಾಟೆಯಾಗಿರುವುದೇ ಈ ಹುಲಿಯ ಸಾವಿಗೆ ಕಾರಣ ಇರಬಹುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ವಿಜಯನ್ ಕುಟುಂಬಸ್ಥರನ್ನೂ ಭೇಟಿ ಮಾಡಲಿರುವ ಪ್ರಿಯಾಂಕಾ

ಪ್ರಿಯಾಂಕಾ ಗಾಂಧಿ ಅವರು ವಯನಾಡ್‌ ಜಿಲ್ಲಾ ಕಾಂಗ್ರೆಸ್‌ ನಾಯಕ ಎನ್.ಎಂ.ವಿಜಯನ್ ಅವರ ಕುಟುಂಬಸ್ಥರನ್ನೂ ಭೇಟಿ ಮಾಡಲಿದ್ದಾರೆ.

ವಯನಾಡ್ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಖಜಾಂಚಿಯಾಗಿದ್ದ ವಿಜಯನ್ ಹಾಗೂ ಪುತ್ರ ಜಿಜೇಶ್, ಕಳೆದ ಡಿಸೆಂಬರ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣಕಾಸು ಅವ್ಯವಹಾರ ಸಂಬಂಧ ಈ ಆತ್ಮಹತ್ಯೆ ಪ್ರಕರಣ ನಡೆದಿದೆ ಎಂದು ಸಿಪಿಐ(ಎಂ) ಮುಖಂಡರು ಹೇಳಿದ್ದಾರೆ.

ಈ ಘಟನೆಯು ರಾಜಕೀಯ ವಿವಾದವನ್ನು ಹುಟ್ಟುಹಾಕಿತ್ತು. ವಿಜಯನ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಐ.ಸಿ.ಬಾಲಕೃಷ್ಣನ್ ಮತ್ತು ಇತರ ಮೂವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯನ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಪ್ರಿಯಾಂಕಾ ಅವರು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.