ADVERTISEMENT

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್ ಕ್ಷಮೆ ಕೇಳಲಿ: ಕಾಂಗ್ರೆಸ್‌ ಒತ್ತಾಯ

ಫೈಜರ್‌ನ ಕೋವಿಡ್‌ ಲಸಿಕೆ ಬಳಸುವಂತೆ ಪಕ್ಷದ ಮುಖಂಡರು ಒತ್ತಾಯಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 15:44 IST
Last Updated 22 ಜನವರಿ 2023, 15:44 IST
ಜೈರಾಮ್‌ ರಮೇಶ್
ಜೈರಾಮ್‌ ರಮೇಶ್   

ನವದೆಹಲಿ: ‘ಕಾಂಗ್ರೆಸ್‌ ನಾಯಕರು ಫೈಜರ್‌ ಕಂಪನಿಯ ಕೋವಿಡ್‌–19 ಲಸಿಕೆಯನ್ನು ಬಳಸುವಂತೆ ಒತ್ತಡ ಹೇರಿದ್ದರು’ ಎಂಬ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್‌, ಸಚಿವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.

‘ರಾಜೀವ್‌ ಚಂದ್ರಶೇಖರ್‌ ಅವರದು ತಿರುಚಿದ ಹಾಗೂ ದುರುದ್ದೇಶಪೂರಿತ ಹೇಳಿಕೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡುವವರಿಂದ ಇಂಥ ಹೇಳಿಕೆಗಳನ್ನು ನಿರೀಕ್ಷಿಸಬಹುದೇ ಹೊರತು ಸಚಿವರೊಬ್ಬರಿಂದ ಅಲ್ಲ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್ ಹೇಳಿದ್ದಾರೆ.

ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಜೈರಾಮ್‌, ‘ಈ ವಿಷಯವಾಗಿ ಕೂಡಲೇ ಕ್ಷಮೆ ಕೇಳಬೇಕು. ಪಕ್ಷದ ಮುಖಂಡರಾದ ರಾಹುಲ್‌ ಗಾಂಧಿ, ಪಿ.ಚಿದಂಬರಂ ಹಾಗೂ ತಮ್ಮ ವಿರುದ್ಧ ಆರೋಪಿಸಿ ಮಾಡಿರುವ ಟ್ವೀಟ್‌ಅನ್ನು ಅಳಿಸಿ ಹಾಕಬೇಕು. ತಪ್ಪಿದಲ್ಲಿ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ADVERTISEMENT

ಟ್ವಿಟರ್‌ನಲ್ಲಿನ ಈ ಪೋಸ್ಟ್‌ಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್‌ ವೇದಿಕೆಗಳ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾತೆ ಅವರು ಕೂಡ ಟ್ವಿಟರ್‌ ಕಂಪನಿಗೆ ಪತ್ರ ಬರೆದಿದ್ದಾರೆ.

ಫೈಜರ್‌ ಲಸಿಕೆ ಪರಿಣಾಮಕಾರಿಯಾಗಿರದ ಕುರಿತು ಕಂಪನಿಯ ಸಿಇಒ ಅವರು ದಾವೋಸ್‌ನಲ್ಲಿ ಪತ್ರಕರ್ತರಿಂದ ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದರು. ಇದರ ಬೆನ್ನಲ್ಲೇ, ರಾಜೀವ್‌ ಚಂದ್ರಶೇಖರ್‌, ‘ಲಸಿಕೆ ಬಳಕೆಗೆ ಸಂಬಂಧಿಸಿ ಕೆಲ ಷರತ್ತುಗಳನ್ನು ಕೈಬಿಡುವಂತೆ ಸರ್ಕಾರವನ್ನು ಫೈಜರ್‌ ಒತ್ತಾಯಿಸಿತ್ತು. ಅಲ್ಲದೇ, ಕಂಪನಿಯ ಈ ಕೋವಿಡ್‌ ಲಸಿಕೆಯನ್ನು ದೇಶದಲ್ಲಿ ಬಳಕೆಗೆ ಅನುಮೋದಿಸುವಂತೆ ರಾಹುಲ್‌, ಚಿದಂಬರಂ ಹಾಗೂ ಜೈರಾಮ್‌ ಒತ್ತಡ ಹೇರುತ್ತಿದ್ದರು ಎಂಬುದನ್ನು ಜನರಿಗೆ ನೆನಪಿಸಲು ಬಯಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.