
ರೇವಾರಿ(ಹರಿಯಾಣ): ಅಯೋಧ್ಯೆಯಲ್ಲಿನ ರಾಮ ಮಂದಿರ ಕುರಿತು ತಳೆದಿರುವ ನಿಲುವಿಗಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ‘ಭಗವಾನ್ ರಾಮ ಕಾಲ್ಪನಿಕ ವ್ಯಕ್ತಿ ಎಂಬುದಾಗಿ ಕರೆಯುತ್ತಿದ್ದವರು ಹಾಗೂ ಮಂದಿರ ನಿರ್ಮಾಣ ಬಯಸದಿದ್ದವರು ಈಗ ಜೈ ಸಿಯಾ ರಾಮ್ ಎಂಬ ಘೋಷಣೆ ಕೂಗುತ್ತಿದ್ದಾರೆ’ ಎಂದು ಶುಕ್ರವಾರ ಹೇಳಿದರು.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಎಸ್) ಶಾಖೆಗೆ ಶಿಲನ್ಯಾಸ ನೆರವೇರಿಸಿ ಹಾಗೂ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ನಂತರ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಪ್ರಧಾನಿ ಅಭ್ಯರ್ಥಿಯಾಗಿ ನಾನು ಕೆಲ ಭರವಸೆಗಳನ್ನು ನೀಡಿದ್ದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ದೇಶದ ಜನರ ಇಚ್ಛೆಯಾಗಿತ್ತು. ಜನರ ಆಶಯವನ್ನು ಪೂರೈಸಲಾಗಿದೆ’ ಎಂದು ಹೇಳಿದರು.
‘ಜನರ ಆಶೀರ್ವಾದದಿಂದ, ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೀಟುಗಳಿಗೆ ಮಹತ್ವ ಇದೆ. ಆದರೆ, ಜನರ ಆಶೀರ್ವಾದವೇ ನನ್ನ ಪಾಲಿಗೆ ದೊಡ್ಡ ಆಸ್ತಿ’ ಎಂದು ಮೋದಿ ಹೇಳಿದರು.
ಯುಎಇಗೆ ಇತ್ತೀಚೆಗೆ ನೀಡಿದ್ದ ಭೇಟಿಯನ್ನು ಪ್ರಸ್ತಾಪಿಸಿದ ಮೋದಿ, ‘ವಿಶ್ವದೆಲ್ಲೆಡೆ ಭಾರತಕ್ಕೆ ಅಪಾರ ಗೌರವ ಸಿಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಈ ಗೌರವ ಮೋದಿಗೆ ಮಾತ್ರ ಸಲ್ಲುವುದಿಲ್ಲ, ಬದಲಾಗಿ ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.