ADVERTISEMENT

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಅಂತಿಮ ಕಣದಲ್ಲಿ ಖರ್ಗೆ–ತರೂರ್

ಮಾಜಿ ಸಚಿವ ತ್ರಿಪಾಠಿ ನಾಮಪತ್ರ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 18:58 IST
Last Updated 1 ಅಕ್ಟೋಬರ್ 2022, 18:58 IST
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣಾ ಕಣ ರಂಗೇರಿದ್ದು, ಜಾರ್ಖಂಡ್‌ನ ಮಾಜಿ ಸಚಿವ ಎನ್.ಕೆ. ತ್ರಿಪಾಠಿ ಅವರ ನಾಮಪತ್ರವನ್ನು ಪಕ್ಷದ ಚುನಾವಣಾ ಪ್ರಾಧಿಕಾರ ಶನಿವಾರ ತಿರಸ್ಕರಿಸಿದೆ. ಹೀಗಾಗಿ ಅಂತಿಮ ಕಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಮಾತ್ರ ಉಳಿದಿದ್ದಾರೆ.

ತ್ರಿಪಾಠಿ ಅವರು ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿರಲಿಲ್ಲ ಎಂದು ಪಕ್ಷದ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೂವರು ಅಭ್ಯರ್ಥಿಗಳು ಕಡೆಯ ದಿನವಾದ ಶುಕ್ರವಾರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಾಧಿಕಾರವು ನಾಮಪತ್ರಗಳನ್ನು ಶನಿವಾರ ಪರಿಶೀಲಿಸಿತು. ತ್ರಿಪಾಠಿ ಅವರ ನಾಮಪತ್ರದಲ್ಲಿದ್ದ ಒಬ್ಬರ ಸಹಿ ಹೊಂದಾಣಿಕೆಯಾಗಲಿಲ್ಲ ಹಾಗೂ ಮತ್ತೊಬ್ಬರ ಸಹಿ ಪುನರಾವರ್ತನೆಯಾಗಿತ್ತು ಎಂದು ಮಿಸ್ತ್ರಿ ತಿಳಿಸಿದ್ದಾರೆ.

ADVERTISEMENT

ನಾಮಪತ್ರ ವಾಪಸ್ ಪಡೆಯಲು ಒಂದು ವಾರ ಕಾಲಾವಕಾಶ ಇದೆ. ಕಣದಲ್ಲಿ ಉಳಿದಿರುವ ಖರ್ಗೆ ಹಾಗೂ ತರೂರ್ ಅವರ ಪೈಕಿ ಯಾರೊಬ್ಬರೂ ಅ.8ರ ಒಳಗೆ ತಮ್ಮ ನಾಮಪತ್ರ ವಾಪಸ್ ಪಡೆಯದಿದ್ದಲ್ಲಿ, ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದೆ. ಅ.19ರಂದು ಮತ ಎಣಿಕೆ ನಡೆಯಲಿದೆ.

‘ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಖರ್ಗೆ ಹಾಗೂ ನಾನು ಸ್ನೇಹಪೂರ್ವಕವಾಗಿ ಸ್ಪರ್ಧಿಸುತ್ತಿದ್ದೇವೆ. ಈ ಪ್ರಜಾತಂತ್ರ ಪ್ರಕ್ರಿಯೆಯಿಂದ ಪಕ್ಷ ಹಾಗೂ ಪಕ್ಷದ ಸದಸ್ಯರಿಗೆ ನೆರವಾಗಲಿದೆ’ ಎಂದು ತರೂರ್ ಹೇಳಿದರು.

ಅಚ್ಚರಿ ಮೂಡಿಸಿದ ತರೂರ್ ಸೂಚಕರು: ಪಕ್ಷ ನಾಯಕಿ ಮೊಹ್ಸಿನಾ ಕಿದ್ವಾಯಿ, ಕಾಶ್ಮೀರದ ಮುಖಂಡ ಸೈಫುದ್ದೀನ್ ಸೋಜ್, ಸಂಸದ ಕಾರ್ತಿ ಚಿದಂಬರಂ ಸೇರಿ ಮೂವರು ಸಂಸದರು, ಮಾಜಿ ಸಂಸದ ಸಂದೀಪ್ ದೀಕ್ಷಿತ್ ಒಳಗೊಂಡಂತೆ 60 ಜನರು ಶಶಿ ತರೂರ್ ಅವರ ಉಮೇದುವಾರಿಕೆಗೆ ಸೂಚಕರಾಗಿ ಸಹಿ ಹಾಕಿದ್ದಾರೆ.

ನೆಹರೂ–ಗಾಂಧಿ ಕುಟುಂಬ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮೊಹ್ಸಿನಾ ಅವರು ಸಹಿ ಹಾಕಿರುವುದು ಅಚ್ಚರಿ ಮೂಡಿಸಿದೆ. ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ ಪಕ್ಷದ ಜಿ–23 ಮುಖಂಡರ ಜೊತೆ ಇವರು ಗುರುತಿಸಿಕೊಂಡಿರಲಿಲ್ಲ.

ಸೋಜ್ ಅವರು ತಮ್ಮ ಪುತ್ರನ ಜೊತೆ ಸೆ.25ರಂದೇ ಸಹಿ ಹಾಕಿದ್ದರು. ಗುಲಾಂ ನಬಿ ಆಜಾದ್ ಬಳಿಕ ಸೋಜ್ ಅವರೂ ನೆಹರೂ–ಗಾಂಧಿ ಕುಟುಂಬದಿಂದ ದೂರವಾದಂತೆ ಇದರಿಂದ ತೋರುತ್ತಿದೆ.

ಹಿರಿಯ ಕಾಂಗ್ರೆಸ್ಸಿಗ ಎ.ಕೆ. ಆ್ಯಂಟನಿ ಅವರು ಖರ್ಗೆ ಅವರ ಉಮೇದುವಾರಿಕೆಗೆ ಸೂಚಕರಾಗಿ ಸಹಿ ಹಾಕಿದ್ದರೆ, ಅವರ ಪುತ್ರ ಅನಿಲ್ ಕೆ. ಆ್ಯಂಟನಿ ಅವರು ತರೂರ್ ಅವರನ್ನು ಬೆಂಬಲಿಸಿ ಸಹಿ ಹಾಕಿದ್ದಾರೆ.

ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ ರಾಜೀನಾಮೆ

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಸ್ಥಾನಕ್ಕೆ ಶುಕ್ರವಾರ ರಾತ್ರಿಯೇ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ‘ಒಬ್ಬರಿಗೆ ಒಂದು ಹುದ್ದೆ’ ಎಂಬ ನಿಯಮವನ್ನು ಅವರು ಅನುಸರಿಸಿದ್ದಾರೆ.

ಖರ್ಗೆ ಅವರ ಸ್ಥಾನಕ್ಕೆ ಮತ್ತೊಬ್ಬ ಸಮರ್ಥರನ್ನು ಆಯ್ಕೆ ಮಾಡುವ ಸವಾಲುಸೋನಿಯಾ ಅವರ ಮೇಲಿದ್ದು, ಹಿರಿಯ ಮುಖಂಡರಾದ ದಿಗ್ವಿಜಯ್ ಸಿಂಗ್ ಹಾ ಗೂ ಪಿ.ಚಿದಂಬರಂ ಅವರು ಈ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಮುಕುಲ್ ವಾಸ್ನಿಕ್ ಹಾಗೂ ಪ್ರಮೋದ್ ತಿವಾರಿ ಅವರ ಹೆಸರೂ ಕೇಳಿಬರುತ್ತಿದೆ. ಅಶೋಕ್ ಗೆಹಲೋತ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ದಿಗ್ವಿಜಯ್ ಸಿಂಗ್ ಅವರು ಕಣಕ್ಕಿಳಿಯಲು ನಿರ್ಧರಿಸಿದ್ದರು. ಆದರೆ ಖರ್ಗೆ ಹೆಸರು ಮುಂಚೂಣಿಗೆ ಬಂದಿದ್ದರಿಂದ ಅವರು ಹಿಂದೆ ಸರಿದಿದ್ದರು.

ಖರ್ಗೆ ಅಧ್ಯಕ್ಷರಾಗ ಚುನಾಯಿತರಾದರೆ, ಉತ್ತರ ಭಾರತದ ಮುಖಂಡರೊಬ್ಬರಿಗೆ ವಿರೋಧಪಕ್ಷದ ನಾಯಕನ ಸ್ಥಾನ ದೊರೆಯಲಿದೆ ಎನ್ನಲಾಗಿದ್ದು, ದಿಗ್ವಿಜಯ್‌ಗೆ ಈ ಸ್ಥಾನ ಸಿಗುವ ಸಾಧ್ಯತೆಯಿದೆ. ಆಗ, ಚಿದಂಬರಂ ಅವರಿಗೆ ಅವಕಾಶ ಸಿಗುವುದು ಕಷ್ಟ. ಮುಕುಲ್ ವಾಸ್ನಿಕ್ ಹಾಗೂ ಪ್ರಮೋದ್ ತಿವಾರಿ ಅವರು ವರಿಷ್ಠರ ಮುಂದಿರುವ ಇತರೆ ಆಯ್ಕೆಗಳು ಎನ್ನಲಾಗಿದೆ.

ಖರ್ಗೆ ಅವರು ‘ಮುಂದುವರಿದ’ ಭಾಗ, ತಾವು ‘ಬದಲಾವಣೆ’ಯ ಭಾಗ ಎಂದು ತರೂರ್ ಹೇಳುತ್ತಾರೆ. ಮುಂದುವರಿಕೆ ಮತ್ತು ಬದಲಾವಣೆ ಒಂದಕ್ಕೊಂದು ಸಂಬಂಧಿಸಿವೆ

- ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಹಿರಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.