ADVERTISEMENT

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ: ತರೂರ್ ಎಲೆಕ್ಷನ್ ಏಜೆಂಟ್ ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2022, 7:38 IST
Last Updated 19 ಅಕ್ಟೋಬರ್ 2022, 7:38 IST
   

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಈ ಮಧ್ಯೆ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಗಂಭೀರವಾದ ಅಕ್ರಮ ನಡೆದಿದೆ ಎಂದು ಶಶಿ ತರೂರ್ ಅವರ ಎಲೆಕ್ಷನ್ ಏಜೆಂಟ್, ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಹಾಕಲಾಗಿರುವ ಎಲ್ಲ ಮತಗಳನ್ನು ಅಮಾನ್ಯವೆಂದು ಪರಿಗಣಿಸುವಂತೆ ಅವರು ಒತ್ತಾಯಿಸಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ.

ಇದಕ್ಕೂ ಮುನ್ನ, ಪಂಜಾಬ್ ಮತ್ತು ತೆಲಂಗಾಣದ ಚುನಾವಣೆಯಲ್ಲೂ ಅಕ್ರಮ ನಡೆದಿದೆ ಎಂದು ತರೂರ್ ಬಣ ಆರೋಪಿಸಿತ್ತು.

ADVERTISEMENT

ಎರಡು ದಶಕಗಳಿಗೂ ಅಧಿಕ ಸಮಯದ ನಂತರ ಪಕ್ಷದ ಉನ್ನತ ಹುದ್ದೆಗೆ ನೆಹರೂ–ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯೊಬ್ಬರ ಆಯ್ಕೆಗೆ ವೇದಿಕೆ ಸಜ್ಜಾಗಿದೆ.

ಆದರೆ, ಮತ ಎಣಿಕೆಗೂ ಮುನ್ನ ಎಲ್ಲ ರಾಜ್ಯಗಳ ಮತ ಪತ್ರಗಳನ್ನು ಒಂದೆಡೆ ಸುರಿದು ಮಿಶ್ರಣ ಮಾಡಲಾಗಿದೆ. ಇಂದು ದಿನದ ಅಂತ್ಯದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

1998ರಿಂದ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿದ್ದರು. ಕೆಲ ಸಮಯ ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋಲುಂಡ ಬಳಿಕ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.