ADVERTISEMENT

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಮತದಾನ ಆರಂಭ, ಕಣದಲ್ಲಿ ಖರ್ಗೆ–ತರೂರ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 5:40 IST
Last Updated 17 ಅಕ್ಟೋಬರ್ 2022, 5:40 IST
   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಮತದಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಿದೆ. ಸಂಜೆ 4ರವರೆಗೂ ಮತದಾನ ನಡೆಯಲಿದೆ. ಕಾಂಗ್ರೆಸ್ ಕೇಂದ್ರ ಕಚೇರಿ ಮತ್ತು ಇತರ 65 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಮತದಾನದ ಅರ್ಹತೆ ಹೊಂದಿರುವ 9,000ಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ.

ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ಚುನಾವಣೆ ನಡೆಯುತ್ತಿದೆ. ಮತ ಎಣಿಕೆಯು ಬುಧವಾರ ನಡೆಯಲಿದೆ.

ತಿರುವನಂತಪುರ ಸಂಸದ ಶಶಿ ತರೂರ್ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಸ್ಪರ್ಧೆ ಇದೆ. ತರೂರ್ ತಾವು ಬದಲಾವಣೆಗಾಗಿ ಸ್ಪರ್ಧಿಸಿದ್ದೇನೆ ಎಂದಿದ್ದಾರೆ. ಖರ್ಗೆ ಅವರನ್ನು ಹೈಕಮಾಂಡ್‌ನ ನೆಚ್ಚಿನ ಅಭ್ಯರ್ಥಿ ಎಂದು ಹೇಳಲಾಗಿದೆ.

ADVERTISEMENT

ಎಐಸಿಸಿ ಕಚೇರಿಯಲ್ಲಿನ ಮತಕೇಂದ್ರಕ್ಕೆ ಭೇಟಿ ನೀಡಿದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಕೊನೆ ಕ್ಷಣದ ಪರಿಶೀಲನೆ ನಡೆಸಿದರು. ಇದೇ ಮತ ಕೇಂದ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಿಡಬ್ಲ್ಯುಸಿ ಸದಸ್ಯರು ಸೇರಿದಂತೆ 75 ಮಂದಿ ಹಿರಿಯ ನಾಯಕರು ಮತ ಚಲಾಯಿಸಲಿದ್ದಾರೆ.

ದೆಹಲಿ ಕಂಗ್ರೆಸ್ ಕಚೇರಿಯಲ್ಲಿ 280 ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ. ಭಾರತ್ ಜೋಡೊ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಳ್ಳಾರಿಯ ಸಂಗನಕಲ್ಲುವಿನ ಯಾತ್ರೆ ಸ್ಥಳದಲ್ಲೇ ಮತದಾನ ಮಾಡಲಿದ್ದಾರೆ ಎಂದು ಎಎನ್‌ಐ ಟ್ವಿಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.