ADVERTISEMENT

ವಲಸೆ ಕಾರ್ಮಿಕರ ಜೊತೆ ರಾಹುಲ್ ಗಾಂಧಿ ಸಂವಾದ: ವಿಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 10:04 IST
Last Updated 23 ಮೇ 2020, 10:04 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಲಸೆ ಕಾರ್ಮಿಕರ ಜೊತೆ ಸಂವಾದ ನಡೆಸಿದ ವಿಡಿಯೊವನ್ನು ಕಾಂಗ್ರೆಸ್‌ ಪಕ್ಷ ಶನಿವಾರ ಬಿಡುಗಡೆ ಮಾಡಿದೆ.

ಆಗ್ನೇಯ ಭಾಗದಲ್ಲಿರುವ ಸುಖದೇವ್ ವಿಹಾರ್ ಫ್ಲೈಓವರ್ ಬಳಿ ಬೀಡುಬಿಟ್ಟಿರುವ ವಲಸೆ ಕಾರ್ಮಿಕರನ್ನು ರಾಹುಲ್‌ ಗಾಂಧಿ ಮಾತನಾಡಿಸಿರುವ 17 ನಿಮಿಷಗಳ ವಿಡಿಯೊವನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.

ಈ ವಲಸೆ ಕಾರ್ಮಿಕರು ಹರಿಯಾಣದಿಂದ ಉತ್ತರ ಪ್ರದೇಶ ರಾಜ್ಯದ ಝಾನ್ಸಿ ಸಮೀಪದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು.

ADVERTISEMENT

ದೇಶದಾದ್ಯಂತ ಕೊರೊನಾವೈರಸ್ ಹರಡುವುದನ್ನು ತಡೆಯಲು ಹೇರಿರುವ ಲಾಕ್‌ಡೌನ್ ಮಧ್ಯೆ ಸ್ವಗ್ರಾಮ ಮತ್ತು ಇತರ ರಾಜ್ಯಗಳ ಗ್ರಾಮಗಳಿಗೆ ಮರಳಲು ಪ್ರಯತ್ನಿಸುತ್ತಿರುವಾಗ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದರು.

ಮಾಸ್ಕ್ ಧರಿಸಿರುವ ರಾಹುಲ್ ಗಾಂಧಿ, ಪಾದಚಾರಿ ಮಾರ್ಗದಲ್ಲಿ ಕುಳಿತು, ಕನಿಷ್ಠ ಮೂವರು ಪುರುಷರೊಂದಿಗೆ ಮಾತನಾಡುತ್ತಿದ್ದರೆ, ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಇತರರು ಹತ್ತಿರದಲ್ಲಿಯೇ ಕುಳಿತುಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಲಸೆ ಕಾರ್ಮಿಕರು ತಮಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು.

ರಾಹುಲ್ ಗಾಂಧಿ ವಲಸಿಗರೊಂದಿಗೆ ಮಾತುಕತೆ ನಡೆಸಿದ ನಂತರ, ಮೇಲಿನವರ ಆದೇಶದ ಮೇ‌ರೆಗೆ ಕಾರ್ಮಿಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವರದಿಗಳು ಬಂದಿದ್ದವು. ಇಂತಹ ವರದಿಗಳನ್ನು ಪೊಲೀಸರು ನಿರಾಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.