ADVERTISEMENT

'ಲಂಚಕ್ಕಾಗಿ ರಫೇಲ್‌ ಒಪ್ಪಂದದ ಮರುಪರಿಶೀಲನೆಗೆ ಕಳುಹಿಸಿದ್ದ ಕಾಂಗ್ರೆಸ್‌'

ಏಜೆನ್ಸೀಸ್
Published 22 ಸೆಪ್ಟೆಂಬರ್ 2018, 17:04 IST
Last Updated 22 ಸೆಪ್ಟೆಂಬರ್ 2018, 17:04 IST
   

ನವದೆಹಲಿ:ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಸೃಷ್ಟಿಯಾಗಿರುವ ವಿವಾದದಿಂದ ರಾಷ್ಟ್ರ ರಾಜಕಾರಣದಲ್ಲಿ ಬಾರಿ ಚರ್ಚೆ ನಡೆಯುತ್ತಿದ್ದು, ವಿಪಕ್ಷ–ಆಡಳಿತ ಪಕ್ಷಗಳ ಮುಖಂಡರ ನಡುವೆ ವಾಗ್ವಾದ ಬಿರುಸುಗೊಂಡಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಆಡಳಿತದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರೆ, ಬಿಜೆಪಿ ಶನಿವಾರ ತಿರುಗೇಟು ನೀಡಿದೆ.

’ಡಸಾಲ್ಟ್‌ ಕಂಪನಿ ಅತ್ಯಂತ ಕಡಿಮೆ ಮೊತ್ತಕ್ಕೆ ವಿಮಾನ ಸಿದ್ಧಪಡಿಸಲು ಬಿಡ್‌ ಮಾಡಿರುವುದನ್ನು ಗಮನಿಸಿದ್ದರೂ 2012ರಲ್ಲಿ ಆರು ತಿಂಗಳ ಬಳಿಕ, ರಫೇಲ್‌ ಒಪ್ಪಂದದ ಪುನರ್‌ಪರಿಶೀಲನೆಗಾಗಿ ಮರಳಿಸಿದ್ದು ಯಾವ ಕಾರಣಕ್ಕಾಗಿ? ಅವರಿಗೆ(ಕಾಂಗ್ರೆಸ್) ಲಂಚ ದೊರೆತಿರಲಿಲ್ಲ, ಅದಕ್ಕಾಗಿ’ ಎಂದು ಕೇಂದ್ರ ಕಾನೂನು ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ರವಿ ಶಂಕರ್‌ ಪ್ರಸಾದ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ’ಪ್ರಧಾನಿ ಮೋದಿ ಒಬ್ಬ ಕಳ್ಳ’ ಎಂದು ಕರೆದಿರುವುದಾಗಿ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಸಚಿವ ರವಿ ಶಂಕರ್‌ ಪ್ರಸಾದ್‌ ವಿರೋಧ ವ್ಯಕ್ತಪಡಿಸಿದರು. ’ದೇಶದ ಪ್ರಧಾನಿಯ ವಿರುದ್ಧ ರಾಷ್ಟ್ರೀಯ ಪಕ್ಷದ ಅಧ್ಯಕ್ಷರೊಬ್ಬರು ಯಾವತ್ತಿಗೂ ಇಂಥ ಪದ ಬಳಕೆ ಮಾಡಿರಲಿಲ್ಲ. ಇದು ತೀವ್ರ ಅವಮಾನಕಾರಿ ಮತ್ತು ಬೇಜವಾಬ್ದಾರಿ ಹೇಳಿಕೆ. ರಾಹುಲ್‌ ಗಾಂಧಿಯಿಂದ ಬೇರೆ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ. ಅವರ ತಾಯಿಯೊಂದಿಗೆ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಹಾಗೂ ತನ್ನ ಭಾವನ ವಿರುದ್ಧದ ಭೂ ಕಬಳಿಕೆ ಪ್ರಕರಣದ ಬಗ್ಗೆ ಮೌನ ತಾಳಿದ್ದಾರೆ’ ಎಂದು ರಾಹುಲ್‌ ವಿರುದ್ಧ ಹರಿಹಾಯ್ದರು.

ADVERTISEMENT

ಈ ಹಗರಣದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರೂಪಿಸಬೇಕು ಎಂದು ರಾಹುಲ್‌ ಗಾಂಧಿ ಮಾಡಿದ್ದ ಒತ್ತಾಯವನ್ನು ತಳ್ಳಿಹಾಕಿ, 'ಸುಳ್ಳಿನ ಮೇಲೆ ಸುಳ್ಳನ್ನು ಆಡುವ ಅಹಂಕಾರಿ ನಾಯಕ'ನ ಅಹಂ ತಣಿಸುವುದಕ್ಕಾಗಿ ಸಮಿತಿ ರೂಪಿಸಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅಧಿಕಾರವಧಿಯಲ್ಲಿನ ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿಯೇ ರಿಲಯನ್ಸ್‌ ಸಂಸ್ಥೆಯ ಪ್ರಸ್ತಾಪವಿರುವುದಾಗಿ ಹೇಳಿದರು. ಆದರೆ, ಅದು ಮುಖೇಶ್‌ ಅಂಬಾನಿ ನಿರ್ವಹಣೆ ಇದ್ದ ಸಂಸ್ಥೆಯಾಗಿತ್ತು ಹಾಗೂ ರಕ್ಷಣಾ ಸಾಮಗ್ರಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಡಸಾಲ್ಟ್‌ ಕಂಪೆನಿ ಜತೆಗೆ ರಫೇಲ್‌ ಯುದ್ಧ ವಿಮಾನ ಖರೀದಿಸಲು ಮಾಡಿಕೊಂಡ ಒಪ್ಪಂದದಲ್ಲಿ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನೇ ದೇಶೀ ಪಾಲುದಾರನಾಗಿ ಸೇರಿಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಶುಕ್ರವಾರ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹೊರಬರುತ್ತಿದ್ದಂತೆ ದೇಶದ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆ ನಿರ್ಮಾಣವಾಗಿದೆ.

ಇನ್ನಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.