ADVERTISEMENT

ತಮಿಳುನಾಡು ಕಾಂಗ್ರೆಸ್‌ ಘಟಕ ಪುನರ್‌ರಚನೆ

ಪಿಟಿಐ
Published 2 ಜನವರಿ 2021, 18:47 IST
Last Updated 2 ಜನವರಿ 2021, 18:47 IST
ಕೆ.ಸಿ.ವೇಣುಗೋಪಾಲ್‌
ಕೆ.ಸಿ.ವೇಣುಗೋಪಾಲ್‌   

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯ ಘಟಕವನ್ನು ಪುನರ್‌ರಚಿಸಿರುವ ಕಾಂಗ್ರೆಸ್‌, ಪಿ.ಚಿದಂಬರಂ ಹಾಗೂ ಮಣಿ ಶಂಕರ್‌ ಅಯ್ಯರ್‌ ಅವರನ್ನು ಒಳಗೊಂಡ ಪ್ರಮುಖ ತಂಡಗಳನ್ನು ರಚಿಸಿದೆ.

ನೂತನ ರಾಜ್ಯ ಘಟಕದಲ್ಲಿ 32 ಉಪಾಧ್ಯಕ್ಷರು, 57 ಪ್ರಧಾನ ಕಾರ್ಯದರ್ಶಿಗಳು ಹಾಗೂ 104 ಕಾರ್ಯದರ್ಶಿಗಳಿದ್ದಾರೆ. ಘಟಕದ ಖಜಾಂಚಿಯಾಗಿ ರುಬಿ ಆರ್‌. ಮನೋಹರನ್‌ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಕಾಂಗ್ರೆಸ್‌ ಸಂಘಟನೆ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ.

‘ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಅಧ್ಯಕ್ಷರ ನೇಮಕಾತಿ, ಪ್ರದೇಶ ಚುನಾವಣಾ ಸಮಿತಿ, ಚುನಾವಣಾ ಸಮನ್ವಯ ಸಮಿತಿ, ಪ್ರಣಾಳಿಕೆ ಸಮಿತಿ ರಚಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಪಕ್ಷವು ತಿಳಿಸಿದೆ. ಟಿಎನ್‌ಸಿಸಿ ಅಧ್ಯಕ್ಷ ಕೆ.ಎಸ್‌.ಅಳಗಿರಿ ನೇತೃತ್ವದಲ್ಲಿ 56 ಸದಸ್ಯರಿರುವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲಿ ಕೇಂದ್ರ ಸಚಿವರಾಗಿದ್ದ ಚಿದಂಬರಂ, ಅಯ್ಯರ್‌, ಸಂಸದರಾದ ಎ.ಚೆಲ್ಲಕುಮಾರ್‌, ಕಾರ್ತಿ ಚಿದಂಬರಂ, ಎಸ್‌.ಜ್ಯೋತಿಮಣಿ, ಕೆ.ಜಯಕುಮಾರ್‌ ಮತ್ತಿತರರು ಇದ್ದಾರೆ.

ADVERTISEMENT

ಏಪ್ರಿಲ್‌–ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಡಿಎಂಕೆ ಜೊತೆಗೂಡಿ ಕಾಂಗ್ರೆಸ್‌ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

‘ಬೃಹತ್‌ ಗಾತ್ರದ ಸಮಿತಿಗಳಿಂದ ಯಾವ ಪ್ರಯೋಜನವೂ ಇಲ್ಲ’
ನವದೆಹಲಿ:
ರಾಜ್ಯ ಘಟಕದ ಪುನರ್‌ರಚನೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಾಜ್ಯದ ಸಂಸದ ಕಾರ್ತಿ ಚಿದಂಬರಂ, ‘ಬೃಹತ್‌ ಸಮಿತಿಗಳು ಯಾವುದೇ ಉದ್ದೇಶವನ್ನೂ ಈಡೇರಿಸಲ್ಲ. ಏಕೆಂದರೆ ಯಾರಿಗೂ ಇಲ್ಲಿ ಯಾವುದೇ ಅಧಿಕಾರವಿರುವುದಿಲ್ಲ ಜೊತೆಗೆ ಯಾರಿಗೂ ಹೊಣೆಗಾರಿಕೆ ಇರುವುದಿಲ್ಲ’ ಎಂದು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಈ ಜಂಬೋ ಸಮಿತಿಗಳಿಂದ ಯಾವುದೇ ಪ್ರಯೋಜನವಿಲ್ಲ. 32 ಉಪಾಧ್ಯಕ್ಷರು, 57 ಪ್ರಧಾನ ಕಾರ್ಯದರ್ಶಿಗಳು, 104 ಕಾರ್ಯದರ್ಶಿಗಳು. ಯಾರಿಗೂ ಯಾವ ಅಧಿಕಾರವೂ ಇರಲ್ಲ, ಹೀಗಾಗಿ ಹೊಣೆಗಾರಿಕೆಯೂ ಇಲ್ಲ’ ಎಂದು ಉಲ್ಲೇಖಿಸಿದ್ದಾರೆ. ಈ ಟ್ವೀಟ್‌ಗೆ ತಮಿಳುನಾಡು ಎಐಸಿಸಿ ಉಸ್ತುವಾರಿ ದಿನೇಶ್‌ ಗುಂಡೂರಾವ್‌, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿ ಹಲವರನ್ನು ಟ್ಯಾಗ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.