ನವದೆಹಲಿ: ಚುನಾವಣಾ ಆಯೋಗವು ಅಸಮರ್ಥತೆ ಮಾತ್ರವಲ್ಲದೇ ಸ್ಪಷ್ಟ ಪಕ್ಷಪಾತ ಧೋರಣೆ ಹೊಂದಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಕಾಂಗ್ರೆಸ್ ಆರೋಪಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇಬ್ಬರು ಚುನಾವಣಾ ಆಯುಕ್ತರ ಜತೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಚುನಾವಣಾ ಸಂಸ್ಥೆಯು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಪಟ್ಟಿಯಿಂದ ಕೈಬಿಟ್ಟಿರುವ 65 ಲಕ್ಷ ಮತದಾರರ ಹೆಸರು ಮತ್ತು ವಿವರಗಳನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿತ್ತು.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಮತ ಕಳ್ಳತನ ವಿರೋಧಿಸಿ ಇಂದು ಆರಂಭವಾದ ‘ಮತದಾರನ ಅಧಿಕಾರ (ಮತದಾರರ ಹಕ್ಕು) ಯಾತ್ರೆ’ಯಲ್ಲಿ ರಾಹುಲ್ ಭಾಗಿಯಾದ ಕೆಲವೇ ಹೊತ್ತಿನಲ್ಲಿ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿತ್ತು.
ಚುನಾವಣಾ ಆಯೋಗದ ಸ್ಪಷ್ಟ ಪಕ್ಷಪಾತ ಧೋರಣೆಗೆ ಬೆಟ್ಟದಷ್ಟು ಪುರಾವೆಗಳಿದ್ದರೂ, ಸರಳವಾಗಿ ಹೇಳುವುದಾದರೆ ಇದು ನಗೆಪಾಟಲಿಗೆ ಈಡಾಗುವಂತಹದ್ದಾಗಿದೆ. ರಾಹುಲ್ ಗಾಂಧಿಯವರು ಎತ್ತಿರುವ ಯಾವುದೇ ತೀಕ್ಷ್ಣ ಪ್ರಶ್ನೆಗಳಿಗೆ ಸಿಇಸಿ ಉತ್ತರಿಸಲಿಲ್ಲ ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.