ADVERTISEMENT

ಗೋಧಿ ರಫ್ತು ನಿಷೇಧ ರೈತ ವಿರೋಧಿ ನಡೆ: ಕಾಂಗ್ರೆಸ್ ಟೀಕೆ

ಪಿಟಿಐ
Published 14 ಮೇ 2022, 7:31 IST
Last Updated 14 ಮೇ 2022, 7:31 IST
ಪಿ. ಚಿದಂಬರಂ
ಪಿ. ಚಿದಂಬರಂ   

ಉದಯಪುರ: ಗೋಧಿ ರಫ್ತು ನಿಷೇಧಿಸಿರುವುದು ರೈತ ವಿರೋಧಿ ನಡೆ. ಈ ಮೂಲಕ ಕೇಂದ್ರ ಸರ್ಕಾರವು, ರಫ್ತಿನಿಂದ ಸಿಗುವ ಹೆಚ್ಚುವರಿ ಬೆಲೆಯ ಪ್ರಯೋಜನ ರೈತರಿಗೆ ದೊರೆಯದಂತೆ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ದೇಶದಲ್ಲಿ ದರ ಏರಿಕೆ ತಡೆಯಲು ಕ್ರಮ ಕೈಗೊಂಡಿದ್ದ ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಿತ್ತು.

ಈ ಕುರಿತು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನಾ ಶಿಬಿರದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯಿತು. ಅದಕ್ಕುತ್ತರಿಸಿದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ‘ಕೇಂದ್ರ ಸರ್ಕಾರವು ಸಾಕಷ್ಟು ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಲು ವಿಫಲವಾಗಿರುವುದೇ ಇದಕ್ಕೆ ಕಾರಣ ಎಂದು ಭಾವಿಸುತ್ತೇನೆ. ಗೋಧಿ ಉತ್ಪಾದನೆ ಕಡಿಮೆಯಾಗಿದೆ ಎನ್ನಲಾಗದು, ಸ್ವಲ್ಪ ಹೆಚ್ಚು–ಕಡಿಮೆ ಆಗಿರಬಹುದು. ವಾಸ್ತವವಾಗಿ ಸ್ವಲ್ಪ ಹೆಚ್ಚೇ ಇರಬಹುದು’ ಎಂದು ಹೇಳಿದ್ದಾರೆ.

ADVERTISEMENT

ಒಂದು ವೇಳೆ, ಸರಿಯಾಗಿ ಖರೀದಿ ಮಾಡಿದ್ದರೆ ರಫ್ತು ನಿಷೇಧಿಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಗೋಧಿ ರಫ್ತು ನಿಷೇಧ ರೈತ ವಿರೋಧಿ ನಡೆ. ಈ ನಿರ್ಧಾರದಿಂದ ಹೆಚ್ಚಿನ ರಫ್ತು ಬೆಲೆಯ ಲಾಭ ರೈತರಿಗೆ ದೊರೆಯುವುದಿಲ್ಲ. ಸರ್ಕಾರದ ಈ ನಿರ್ಧಾರದಿಂದ ಅಚ್ಚರಿಯಾಗಿಲ್ಲ. ಈ ಸರ್ಕಾರ ಎಂದಿಗೂ ರೈತಸ್ನೇಹಿಯಾಗಿರಲೇ ಇಲ್ಲ’ ಎಂದು ಚಿದಂಬರಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.