ADVERTISEMENT

‘ರಾಜಕೀಯಕ್ಕೆ ದ್ವೇಷ ಬಳಸುತ್ತಿರುವ ಬಿಜೆಪಿ’-ರಾಹುಲ್ ಗಾಂಧಿ

ಪಿಟಿಐ
Published 19 ಮಾರ್ಚ್ 2021, 21:49 IST
Last Updated 19 ಮಾರ್ಚ್ 2021, 21:49 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಸ್ಸಾಂನ ಡಿಬ್ರುಗಢದ ಲೌಹಾಲ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಶುಕ್ರವಾರ ಸಂವಾದ ನಡೆಸಿದರು–ಪಿಟಿಐ ಚಿತ್ರ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಸ್ಸಾಂನ ಡಿಬ್ರುಗಢದ ಲೌಹಾಲ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಶುಕ್ರವಾರ ಸಂವಾದ ನಡೆಸಿದರು–ಪಿಟಿಐ ಚಿತ್ರ   

ಲಾಹೌಲ್ (ಅಸ್ಸಾಂ): ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಅಸ್ಸಾಂನಲ್ಲಿ ಜಾರಿ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಭರವಸೆ ನೀಡಿದ್ದಾರೆ.

ಡಿಬ್ರುಗಢ ಜಿಲ್ಲೆಯ ಲಾಹೌಲ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಉಳಿದ ರಾಜ್ಯಗಳಲ್ಲೂ ಸಿಎಎ ಜಾರಿಗೆ ತಡೆ ನೀಡಲಾಗುವುದು ಎಂದು ಹೇಳಿದರು.

‘ಯಾವ ಧರ್ಮವೂ ದ್ವೇಷವನ್ನು ಬಿತ್ತುವುದಿಲ್ಲ. ಹಿಂದೂ ಧರ್ಮದಲ್ಲಿ ದ್ವೇಷದ ಬಗ್ಗೆ ಎಲ್ಲಿ ಉಲ್ಲೇಖಿಸಲಾಗಿದೆ ಹೇಳಿ? ಆದರೆ ಬಿಜೆಪಿ ಧರ್ಮವನ್ನು ರಾಜಕೀಯಕ್ಕೆ ಬಳಸುತ್ತಿಲ್ಲ ಬದಲಿಗೆ ದ್ವೇಷವನ್ನು ಬಳಸಿಕೊಳ್ಳುತ್ತಿದೆ. ಸಮಾಜವನ್ನು ವಿಭಜಿಸಲು ದ್ವೇಷವನ್ನು ಹರಡುತ್ತಿದೆ. ಬಿಜೆಪಿ ಎಲ್ಲೆಲ್ಲಿ ಹೀಗೆ ದ್ವೇಷ ಬಿತ್ತಿದೆಯೋ ಅಲ್ಲೆಲ್ಲಾ ಕಾಂಗ್ರೆಸ್ ಪಕ್ಷವು ಪ್ರೀತಿ, ಸಹೋದರತ್ವ ಮತ್ತು ಸಾಮರಸ್ಯ ಉತ್ತೇಜಿಸಲು ಶ್ರಮಿಸುತ್ತದೆ’ ಎಂದು ರಾಹುಲ್ ಹೇಳಿದರು.

ADVERTISEMENT

ಆರ್‌ಎಸ್‌ಎಸ್‌ ಬಗ್ಗೆ ಪ್ರಸ್ತಾಪಿಸಿದ ಅವರು, ‘ದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಂಘ ಪರಿವಾರ ಯತ್ನಿಸುತ್ತಿದೆ. ಆದರೆ ಭವಿಷ್ಯದ ಪ್ರಜೆಗಳಾದ ಯುವಜನರು ಪ್ರೀತಿ ಮತ್ತು ವಿಶ್ವಾಸದಿಂದ ಇದನ್ನು ತಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

20 ವರ್ಷಗಳ ಹಿಂದೆ ಅಸ್ಸಾಂ ಹಿಂಸಾಚಾರದಿಂದ ಕೂಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಾಂತಿ ಹಾಗೂ ಅಭಿವೃದ್ಧಿಯನ್ನು ಖಚಿತಪಡಿಸಿದೆ. ಬಿಜೆಪಿಯ ಉದ್ದೇಶ ಒಡೆಯುವುದು. ಆದರೆ ನಮ್ಮ ಉದ್ದೇಶ ಜೋಡಿಸುವುದು ಎಂದರು.

‘ದ್ವೇಷ ಹಾಗೂ ನಿರುದ್ಯೋಗದ ನಡುವೆ ನೇರ ಸಂಬಂಧವಿದೆ. ದ್ವೇಷ ಹೆಚ್ಚಿದರೆ ನಿರುದ್ಯೋಗ ಹೆಚ್ಚುತ್ತದೆ. ನಿರುದ್ಯೋಗ ಹೆಚ್ಚಿದಾಗಲೂ ದ್ವೇಷ ಹುಟ್ಟುತ್ತದೆ. ವ್ಯವಹಾರ ನಡೆಯಲು ಅಥವಾ ಉದ್ಯೋಗಾವಕಾಶಗಳು ಸೃಷ್ಟಿಯಾಗಲು ಸಾಮರಸ್ಯ ಮತ್ತು ಸಹೋದರತ್ವ ಇರಬೇಕು’ ಎಂದು ರಾಹುಲ್ ವಿವರಿಸಿದರು.

‘ಬಿಜೆಪಿಯು ಅಸ್ಸಾಂನ ಸಂಪನ್ಮೂಲಗಳನ್ನು ಮಾರಾಟಕ್ಕಿಟ್ಟಿದೆ. ರಾಜ್ಯದ ಚಹಾ ಕಂಪನಿಗಳು, ಗುವಾಹಟಿ ವಿಮಾನ ನಿಲ್ದಾಣವನ್ನು ಅದಾನಿ ಹಾಗೂ ಹೊರಗಿನವರಿಗೆ ಮಾರಾಟ ಮಾಡಿದೆ ಎಂದು ಅವರು ಆರೋಪಿಸಿದರು. ರಾಜ್ಯದ ಸಂಪನ್ಮೂಲಗಳು ಅಸ್ಸಾಮಿಗರ ಜೇಬಿಗೆ ಸೇರಬೇಕು’ ಎಂದು ಅಭಿಪ್ರಾಯಪಟ್ಟರು.

‘ಅಸ್ಸಾಂನಲ್ಲಿ ಸರ್ಕಾರವು ಐದು ಭರವಸೆಗಳನ್ನು ನೀಡಿತ್ತು. ಐದು ವರ್ಷಗಳಲ್ಲಿ ಐದು ಲಕ್ಷ ಸರ್ಕಾರಿ ಉದ್ಯೋಗ, 200 ಯೂನಿಟ್‌ವರೆಗೆ ಉಚಿತ ವಿದ್ಯುತ್, ಚಹಾ ತೋಟಗಳ ಕಾರ್ಮಿಕರಿಗೆ ₹365 ದಿನಗೂಲಿ, ಗೃಹಿಣಿಯರಿಗೆ ತಿಂಗಳಿಗೆ ₹2000 ಸಹಾಯಧನ ಹಾಗೂ ಸಿಎಎ ಜಾರಿ ಮಾಡುವುದಿಲ್ಲ ಎಂಬ ಭರವಸೆ ನೀಡಿತ್ತು. ಬಿಜೆಪಿಯ ಹಾಗೆ ಪೊಳ್ಳು ಭರವಸೆಗಳನ್ನು ಕಾಂಗ್ರೆಸ್ ನೀಡುವುದಿಲ್ಲ’ ಎಂದು ಹೇಳಿದರು.

‘ಪಕ್ಷ ಅಧಿಕಾರಕ್ಕೆ ಬಂದರೆ ಖಾಲಿಯಿರುವ ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶಿಕ್ಷಣ, ಆರೋಗ್ಯ ವಲಯದಲ್ಲಿ ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡಲಾಗುತ್ತದೆ’ ಎಂದರು.

ಶನಿವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.