ADVERTISEMENT

ಮಣಿಪುರದ ಇತಿಹಾಸ, ಸಂಸ್ಕೃತಿ, ಭಾಷೆಯನ್ನು ಕಾಂಗ್ರೆಸ್ ರಕ್ಷಿಸಲಿದೆ: ರಾಹುಲ್ ಗಾಂಧಿ

ಪಿಟಿಐ
Published 21 ಫೆಬ್ರುವರಿ 2022, 12:57 IST
Last Updated 21 ಫೆಬ್ರುವರಿ 2022, 12:57 IST
ರಾಹುಲ್ ಗಾಂಧಿ ಅವರು ಇಂಫಾಲದಲ್ಲಿ ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದರು – ಪಿಟಿಐ ಚಿತ್ರ
ರಾಹುಲ್ ಗಾಂಧಿ ಅವರು ಇಂಫಾಲದಲ್ಲಿ ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದರು – ಪಿಟಿಐ ಚಿತ್ರ   

ಇಂಫಾಲ: ಮಣಿಪುರದ ಇತಿಹಾಸ, ಸಂಸ್ಕೃತಿ, ಭಾಷೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಡೆಗಣಿಸಿವೆ. ಆದರೆ ನಮ್ಮ ಪಕ್ಷ ಅವುಗಳನ್ನು ರಕ್ಷಿಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇಂಫಾಲದಲ್ಲಿ ಸಾರ್ವಜನಿಕ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರದಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ, ಎಂಎಸ್‌ಎಂಇ ಕ್ಷೇತ್ರದ ಪುನಶ್ಚೇತನ, ಭತ್ತ ಬೆಳೆಯಲ್ಲಿ ಸ್ವಾವಲಂಬನೆ, ನೀರಾವರಿ ಸೌಲಭ್ಯ, ಫುಡ್ ಪಾರ್ಕ್‌ಗಳ ಸ್ಥಾಪನೆ ಹಾಗೂ ಮಹಿಳಾ ನಿಯಂತ್ರಣದಲ್ಲಿರುವ ‘ಇಮಾ ಮಾರುಕಟ್ಟೆ’ಗಳ ಸ್ಥಾಪನೆಯ ಭರವಸೆ ನೀಡಿದ್ದಾರೆ.

‘ಬಿಜೆಪಿ ಮತ್ತು ಆರ್‌ಎಸ್ಎಸ್ ಮಣಿಪುರದ ಬಗ್ಗೆ ಗೌರವದೊಂದಿಗೆ ಇಲ್ಲಿಗೆ ಬಂದಿಲ್ಲ. ಅಹಮಿಕೆಯೊಂದಿಗೆ ಬಂದಿವೆ. ಆದರೆ, ನಾನು ಇಲ್ಲಿನ ವೈವಿಧ್ಯಮಯ ಬುಡಕಟ್ಟುಗಳು, ಬೆಟ್ಟಗಳು ಮತ್ತು ಕಣಿವೆಗಳ ಬಗ್ಗೆ ಕಲಿಯಲು ನಮ್ರತೆಯಿಂದ ಬಂದಿದ್ದೇನೆ’ ಎಂದು ರಾಹುಲ್ ಹೇಳಿದ್ದಾರೆ.

ADVERTISEMENT

‘ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆ, ಸಂಸ್ಕೃತಿ, ಇತಿಹಾಸವನ್ನು ಒಳಗೊಂಡಿರುವ ಸಮಾನ ಹಕ್ಕು ಹೊಂದಿದೆ ಎಂಬುದಾಗಿ ನಾನು ಭಾವಿಸುತ್ತೇನೆ. ಆದರೆ ಬಿಜೆಪಿಯು ಒಂದೇ ಭಾಷೆ, ಒಂದೇ ಸಂಸ್ಕೃತಿ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದೆ. ಭಾರತವು ಈ ಎರಡು ಸಿದ್ಧಾಂತಗಳ ನಡುವಣ ಯುದ್ಧವನ್ನು ಎದುರಿಸುತ್ತಿದೆ’ ಎಂದು ರಾಹುಲ್ ಹೇಳಿದ್ದಾರೆ.

ಮಣಿಪುರದಲ್ಲಿ ಫೆ. 28 ಹಾಗೂ ಮಾರ್ಚ್ 3ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. 2017ರ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಪ್ರಾದೇಶಿಕ ಪಕ್ಷಗಳಾದ ಎನ್‌ಪಿಪಿ ಹಾಗೂ ಎನ್‌ಪಿಎಫ್ ಸಹಕಾರದಿಂದ ಬಿಜೆಪಿ ಅಧಿಕಾರಕ್ಕೆ ಏರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.