ADVERTISEMENT

ಭಾರತ್ ಜೋಡೊ ಯಾತ್ರೆ: ರಸ್ತೆಯುದ್ದಕ್ಕೂ ರಾಹುಲ್‌ ಸ್ವಾಗತಕ್ಕೆ ಭಾರಿ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:26 IST
Last Updated 8 ಸೆಪ್ಟೆಂಬರ್ 2022, 16:26 IST
   

ಕನ್ಯಾಕುಮಾರಿ/ಸುಚಿಂದ್ರಮ್‌/ನಾಗರ್‌ಕೋಯಿಲ್‌:‘ದ್ವೇಷದ ರಾಜಕಾರಣ ಮಣಿಯಲಿದೆ. ದ್ವೇಷವೇ ಅವರ ಪಕ್ಷದ ಮೇಲೆ ಚುನಾವಣೆಯಲ್ಲಿ ಅಡ್ಡ ಪರಿಣಾಮ ಬೀರಲಿದೆ’ ಎಂಬ ಭರವಸೆಯೊಂದಿಗೆ ನೂರಾರು ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು, ‘ತಲೈವರ್’ ರಾಹುಲ್ ಗಾಂಧಿ ಎಂಬ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್‌ನ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ಹೆಜ್ಜೆ ಹಾಕಿದರು.

ದೇವಾಲಯಗಳ ಪಟ್ಟಣ ಸುಚಿಂದ್ರಮ್‌ನಲ್ಲಿಬೆಳಿಗ್ಗೆ ಕೆಲ ಸಮಯ ವಿಶ್ರಮಿಸಿ, ಕನ್ಯಾಕುಮಾರಿಯಿಂದ ನಾಗರಕೋಯಿಲ್‌ಗೆ ಸುಮಾರು 21 ಕಿ.ಮೀ. ದೂರವನ್ನು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರಿಗಳ ಜತೆಗೆ ತಲುಪಿದರು.

ರಾಹುಲ್‌ ಜತೆಗೆಪಕ್ಷದ ಹಿರಿಯ ನಾಯಕರಾದ ಪಿ. ಚಿದಂಬರಂ, ಅಶೋಕ್ ಗೆಹಲೋತ್‌, ಕೆ.ಸಿ. ವೇಣುಗೋಪಾಲ್, ದಿಗ್ವಿಜಯ್ ಸಿಂಗ್ ಮತ್ತು ಜೈರಾಮ್ ರಮೇಶ್ ಸೇರಿ ಅನೇಕ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ರಾಹುಲ್‌ ಗಾಂಧಿಯವರು ಪ್ರತಿ ದಿನ 25 ಕಿ.ಮೀ ಕ್ರಮಿಸಲು ಬಯಸಿದ್ದಾರೆ. ಆದರೆ, ಸಂಘಟಕರು ಎಲ್ಲರನ್ನೂ ಗಮನದಲ್ಲಿರಿಸಿಕೊಂಡು ದಿನಕ್ಕೆ 20–22 ಕಿ.ಮೀ ನಡಿಗೆ ನಿಗದಿಪಡಿಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಕಂಟೈನರ್‌ಗಳಲ್ಲಿ ರಾತ್ರಿ ವಾಸ್ತವ್ಯ:

ಯಾತ್ರೆಯಲ್ಲಿ ಪಾಲ್ಗೊಂಡಿರುವ ಸುಮಾರು 230 ಪಾದಯಾತ್ರಿಗಳು ವಾಸ್ತವ್ಯಕ್ಕಾಗಿ ಮಾರ್ಪಡಿಸಿರುವ ಕಂಟೈನರ್‌ಗಳಲ್ಲಿ ರಾತ್ರಿ ಸಮಯ ಕಳೆಯಲಿದ್ದಾರೆ. ಈ ಕಂಟೈನರ್‌ಗಳನ್ನು ಹೊತ್ತಿರುವ ಟ್ರಕ್‌ಗಳು ದಿನವೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲಿವೆ. ಇದೇ ಕಂಟೈನರ್‌ನಲ್ಲಿಯೇ ರಾಹುಲ್‌ ಗಾಂಧಿಯವರು ಬುಧವಾರದ ರಾತ್ರಿ ಕಳೆದಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಗುರುವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.