ADVERTISEMENT

ಮೇಘಾಲಯ: ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ನಾಳೆ ಪ್ರಮಾಣವಚನ

ಪಿಟಿಐ
Published 6 ಮಾರ್ಚ್ 2023, 11:14 IST
Last Updated 6 ಮಾರ್ಚ್ 2023, 11:14 IST
ಕಾನ್ರಾಡ್ ಸಂಗ್ಮಾ
ಕಾನ್ರಾಡ್ ಸಂಗ್ಮಾ   

ಶಿಲ್ಲಾಂಗ್: ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಧ್ಯಕ್ಷ ಕಾನ್ರಾಡ್ ಸಂಗ್ಮಾ ಅವರು ಮಂಗಳವಾರ ಮೇಘಾಲಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈಗಾಗಲೇ ಸಂಗ್ಮಾ ಅವರು ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿ ತಮಗೆ 45 ಶಾಸಕರ ಬೆಂಬಲವಿದ್ದು, ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಹಕ್ಕು ಮಂಡಿಸಿದ್ದಾರೆ.

ಸಂಗ್ಮಾ ಅವರು ಯುಡಿಪಿ, ಬಿಜೆಪಿ, ಎಚ್‌ಎಸ್‌ಪಿಡಿಪಿ ಮತ್ತು ಇಬ್ಬರು ಪಕ್ಷೇತರ ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಸೋಮವಾರ ಸಂಗ್ಮಾ ಸೇರಿದಂತೆ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.

ಮಾರ್ಚ್ 7ರಂದು ಬೆಳಿಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಗ್ಮಾ ಹೇಳಿದ್ದಾರೆ.

ಮೇಘಾಲಯದ ಒಟ್ಟು 60 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಫೆಬ್ರುವರಿ 27 ರಂದು ಚುನಾವಣೆ ನಡೆದಿತ್ತು. ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದ ಯುನೈಟೆಡ್‌ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಎಚ್‌.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.

59 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಎನ್‌ಪಿಪಿ 26 ಗೆಲುವು ಸಾಧಿಸಿದೆ. ಯುಡಿಪಿ 11, ಕಾಂಗ್ರೆಸ್‌ 5, ಟಿಎಂಸಿ 5, ಬಿಜೆಪಿ, ಎಚ್‌ಎಸ್‌ಪಿಡಿಪಿ, ಪಿಡಿಎಫ್‌ ತಲಾ 2, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.