ADVERTISEMENT

‘ರಚನಾತ್ಮಕ ಕಾಂಗ್ರೆಸ್‌’ಗೆ ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅಧ್ಯಕ್ಷ

ಪಿಟಿಐ
Published 29 ಡಿಸೆಂಬರ್ 2025, 16:12 IST
Last Updated 29 ಡಿಸೆಂಬರ್ 2025, 16:12 IST
   

ನವದೆಹಲಿ: ಕಾಂಗ್ರೆಸ್‌ ಪಕ್ಷವು ಕಾರ್ಯಕರ್ತರು ಮತ್ತು ಚಿಂತಕರೊಂದಿಗೆ ತನ್ನ ಸಂಪರ್ಕ ಹೆಚ್ಚಿಸಿಕೊಳ್ಳಲು ಆರಂಭಿಸಿರುವ ‘ಔಟ್‌ರೀಚ್ ಸೆಲ್’ ಘಟಕಕ್ಕೆ ‘ರಚನಾತ್ಮಕ ಕಾಂಗ್ರೆಸ್‘ ಎಂದು ಮರುನಾಮಕರಣ ಮಾಡಿದ್ದು, ಪೂರ್ವ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಈ ನೇಮಕ ಮಾಡಿದರು. ದೆಹಲಿಯ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್‌ ಅವರ ಪುತ್ರ ಸಂದೀಪ್‌ ಅವರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. 

ಸಂದೀಪ್‌ ಅವರ ನೇಮಕಾತಿಯನ್ನು ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್, ‘ರಚನಾತ್ಮಕ ಕಾಂಗ್ರೆಸ್’ ಘಟಕವು ನಾಗರಿಕ ಸಮಾಜದ ವಿವಿಧ ಗುಂಪುಗಳು, ವಿವಿಧ ವಿಷಯಗಳ ತಜ್ಞರು, ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳಿದರು.

ADVERTISEMENT

‘ವಿವಿಧ ನೀತಿ ವಿಷಯಗಳು ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣ ಸಂವಾದವನ್ನು ಏರ್ಪ‍ಡಿಸುವುದು ಈ ಘಟಕದ ಪ್ರಾಥಮಿಕ ಉದ್ದೇಶವಾಗಿದೆ. ಈ ರೀತಿಯ ಸಂವಾದದಿಂದ ದೊರೆಯುವ ಭಿನ್ನ ದೃಷ್ಟಿಕೋನಗಳು ಮತ್ತು ಒಳನೋಟಗಳು ಪಕ್ಷವು ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.