ADVERTISEMENT

ಬಿಜೆಪಿಗೆ ₹1000 ದೇಣಿಗೆ ನೀಡಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 11:08 IST
Last Updated 24 ಅಕ್ಟೋಬರ್ 2018, 11:08 IST
   

ಬೆಂಗಳೂರು:ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನರೇಂದ್ರ ಮೋದಿ ಮೊಬೈಲ್‌ ಆ್ಯಪ್‌ ಮೂಲಕ ಪಕ್ಷಕ್ಕೆ ₹1000 ದೇಣಿಗೆ ನೀಡಿದ್ದು, ಟ್ವಿಟರ್‌ನಲ್ಲಿ ರಸೀದಿ ಪ್ರಕಟಿಸಿಕೊಂಡಿದ್ದಾರೆ.

ಮಂಗಳವಾರ ಪ್ರಧಾನಿ ನರೇಂದ್ರ ಸ್ವತಃ ಆ್ಯಪ್‌ನಿಂದ ದೇಣಿಗೆ ನೀಡಿ, ₹1000 ರಸೀದಿಯನ್ನು ಪ್ರಕಟಿಸಿ ಬಿಜೆಪಿಗೆ ದೇಣಿಗೆ ನೀಡುವಂತೆ ಆಗ್ರಹಿಸಿದ್ದರು. ಇದನ್ನೇ ಅನುಸರಿಸಿರುವ ಯಡಿಯೂರಪ್ಪ ತಮ್ಮ ಪಕ್ಷಕ್ಕೆ ತಾವು ನೀಡಿರುವ ದೇಣಿಗೆಯ ಮಾಹಿತಿ ಟ್ವೀಟಿಸಿದ್ದಾರೆ.

ನರೇಂದ್ರ ಮೋದಿ ಮೊಬೈಲ್‌ ಆ್ಯಪ್‌ ಮೂಲಕ ದೇಣಿಗೆ ನೀಡಿ ದೇಶ ಸೇವೆಗೆ ಸಹಕರಿಸಿ, ಸಾರ್ವಜನಿಕ ಜೀವನದಲ್ಲಿ ಪಾರದರ್ಶಕ ಸಂದೇಶವನ್ನು ರವಾನಿಸಿ ಎಂಬ ಮಾತುಗಳ ಮೂಲಕ ಬಿಜೆಪಿಯ ಅನೇಕ ಮುಖಂಡರು ಸಾರ್ವಜನಿಕರಿಂದ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.

ADVERTISEMENT

ಚುನಾವಣೆಗಾಗಿ ರಾಜಕೀಯ ಪಕ್ಷಗಳು ನಡೆಸುವ ದೇಣಿಗೆ ಸಂಗ್ರಹ ಪ್ರಕ್ರಿಯೆಯಲ್ಲಿ ಹಲವು ಬದಲಾವಣೆಗಳನ್ನು ನಡೆಸಿ, ಸಾರ್ವಜನಿಕರಿಂದ ಸಂದಾಯವಾಗುವ ಹಣ ಪಾರದರ್ಶಕವಾಗಿರುವಂತೆ ಕ್ರಮವಹಿಸಲಾಗಿದೆ. ಬಾಂಡ್‌ಗಳ ಮೂಲಕ ದೇಣಿಗೆ ಹಾಗೂ ನಗದು ವರ್ಗಾವಣೆಯಲ್ಲಿ ಮೊತ್ತದ ಇಳಿಕೆಯೂ ಆಗಿದೆ.

ನರೇಂದ್ರ ಮೋದಿ ಆ್ಯಪ್‌ ಮೂಲಕ ₹5 ರಿಂದ ₹1000 ವರೆಗೂ ದೇಣಿಗೆ ನೀಡಲು ಅವಕಾಶವಿದೆ. ನೀಡುವ ದೇಣಿಗೆಗೆ 80ಜಿಜಿಬಿ/80ಜಿಜಿಸಿಅಡಿ ಆದಾಯ ತೆರಿಗೆ ವಿನಾಯಿತಿ ಇರುವುದಾಗಿ ರಸೀದಿಯಲ್ಲಿ ನಮೂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.