ADVERTISEMENT

ಪೊಲೀಸರ ವಿರುದ್ಧ ಟ್ರೋಲ್‌: ಎರಡು ಎಫ್‌ಐಆರ್‌ ದಾಖಲು

ಮುಂಬೈ: ಕಳೆದ ಮೂರು ತಿಂಗಳಲ್ಲಿ 80 ಸಾವಿರ ನಕಲಿ ಖಾತೆ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 11:37 IST
Last Updated 6 ಅಕ್ಟೋಬರ್ 2020, 11:37 IST
ಸುಶಾಂತ್‌ ಸಿಂಗ್‌ 
ಸುಶಾಂತ್‌ ಸಿಂಗ್‌    

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದ ನಂತರ ಪೊಲೀಸ್‌ ಇಲಾಖೆ ಹಾಗೂ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡುತ್ತಿರುವವರ ವಿರುದ್ಧ ಮುಂಬೈ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಎರಡು ಎಫ್ಐಆರ್‌ ದಾಖಲಿಸಿದ್ದಾರೆ.

ಪೊಲೀಸರ ವರದಿ ಅನ್ವಯ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ 80 ಸಾವಿರಕ್ಕೂ ಅಧಿಕ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿದೆ. ಕಳೆದ ಮೂರು ತಿಂಗಳಿಂದ ಇವುಗಳಲ್ಲಿ ಮುಂಬೈ ಪೊಲೀಸ್‌ ಆಯುಕ್ತ ಪರಮ್‌ ಬಿರ್‌ ಸಿಂಗ್‌ ಅವರನ್ನೂ ಸೇರಿದಂತೆ ಹಲವು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಟ್ರೋಲ್‌ ಮಾಡಲಾಗುತ್ತಿದೆ.

‘ಪೊಲೀಸ್‌ ಇಲಾಖೆ ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧ ಅಸಭ್ಯ ಭಾಷೆಯನ್ನು ಬಳಸಿ ಟ್ರೋಲ್‌ ಮಾಡಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67ರಡಿ ಅಂತಹ ಖಾತೆಗಳ ವಿರುದ್ಧ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಇವುಗಳಲ್ಲಿ ಬಹುತೇಕ ಖಾತೆಗಳು ನಕಲಿಯಾಗಿದ್ದು, ಖಾತೆ ಸೃಷ್ಟಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಎಫ್‌ಐಆರ್‌ ದಾಖಲಿಸಿದ ಪ್ರಕರಣದಲ್ಲಿ ತನಿಖೆ ಆರಂಭಿಸಲಾಗಿದೆ’ ಎಂದು ಸೈಬರ್‌ ವಿಭಾಗದ ಡಿಸಿಪಿ ರಶ್ಮಿ ಕರಂಡಿಕರ್‌ ತಿಳಿಸಿದರು.

ADVERTISEMENT

ಬಹುತೇಕ ಪೋಸ್ಟ್‌ಗಳನ್ನು ಭಾರತದಿಂದಲೇ ಅಪ್‌ಲೋಡ್‌ ಮಾಡಲಾಗಿದ್ದು, ಯುರೋಪ್‌, ದಕ್ಷಿಣ ಪೂರ್ವ ಏಷ್ಯಾ ಸೇರಿದಂತೆ ವಿಶ್ವದ ಹಲವು ಭಾಗಗಳಿಂದಲೂ ಪೋಸ್ಟ್‌ಗಳು ಅಪ್‌ಲೋಡ್‌ ಆಗಿವೆ. ಹಲವು ಪೋಸ್ಟ್‌ಗಳಲ್ಲಿ ‘ಜಸ್ಟಿಸ್‌ ಫಾರ್‌ ಸುಶಾಂತ್‌’ ‘ಎಸ್‌ಎಸ್‌ಆರ್‌’ ಎನ್ನುವ ಹ್ಯಾಶ್‌ಟ್ಯಾಗ್‌ಗಳನ್ನು ಹಾಕಲಾಗಿದೆ ಎಂದು ಸೈಬರ್‌ ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

ಪೊಲೀಸರ ಈ ಕ್ರಮವನ್ನು ಶಿವಸೇನಾ, ಕಾಂಗ್ರೆಸ್‌ ಮುಖಂಡರು ಸ್ವಾಗತಿಸಿದ್ದಾರೆ. ‘80 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಿ ಮುಂಬೈ ಪೊಲೀಸರು ಹಾಗೂ ಮಹಾರಾಷ್ಟ್ರ ಸರ್ಕಾರವನ್ನು ದೂಷಿಸುವ ಹಿಂದೆ ದೊಡ್ಡ ಪಿತೂರಿಯಿದೆ’ ಎಂದು ಮಹಾರಾಷ್ಟ್ರ ವಸತಿ ಸಚಿವ ಡಾ.ಜಿತೇಂದ್ರ ಅವ್ಹಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.