ADVERTISEMENT

Fake News ವಿಚಾರ: SFI ದಾಳಿ ಬಳಿಕ ಏಷ್ಯಾನೆಟ್ ನ್ಯೂಸ್ ಕಚೇರಿಯಲ್ಲಿ ಪೊಲೀಸ್ ಶೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2023, 13:25 IST
Last Updated 5 ಮಾರ್ಚ್ 2023, 13:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು, ಕೇರಳದಲ್ಲಿ ಮಕ್ಕಳು ಮಾದಕ ವಸ್ತು ಜಾಲದ ಸಂತ್ರಸ್ತರಾಗುತ್ತಿದ್ದಾರೆ ಎಂಬ ಆಧಾರ ರಹಿತ ಸುದ್ದಿ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಏಷ್ಯಾನೆಟ್ ನ್ಯೂಸ್‌ ಸುದ್ದಿ ಸಂಸ್ಥೆಯ ಮಲಯಾಳಂ ವಾಹಿನಿ ಕಚೇರಿ ಮೇಲೆ ಶುಕ್ರವಾರ ದಾಳಿ ಮಾಡಿದ್ದರು. ಇದಾದ ಎರಡು ದಿನಗಳ ಬಳಿಕ ಕೇರಳ ಪೊಲೀಸರು ಕೊಯಿಕ್ಕೋಡ್‌ನಲ್ಲಿರುವ ಸುದ್ದಿ ವಾಹಿನಿ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಎಸ್‌ಎಫ್‌ಐ, ಕೇರಳದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ (ಸಿಪಿಐ–ಎಂ) ವಿದ್ಯಾರ್ಥಿ ಸಂಘಟನೆಯಾಗಿದೆ.

ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯು ಕಳೆದ ವರ್ಷ ಪ್ರಕಟಿಸಿರುವ ಕಲ್ಪಿತ ಸರಣಿ ವಿಡಿಯೊ ವರದಿಗಳಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಗುವನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸಿಪಿಐ–ಎಂ ಶಾಸಕ ಪಿ.ವಿ. ಅನ್ವರ್‌ ದೂರು ಸಲ್ಲಿಸಿದ್ದಾರೆ. ಇದರ ಅನ್ವಯ, ವಾಹಿನಿಯ ಅಧಿಕಾರಿಗಳ ವಿರುದ್ಧ ಕೊಯಿಕ್ಕೋಡ್‌ನಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ವಾಹಿನಿಯ ಸಿಬ್ಬಂದಿಯೊಬ್ಬರ ಮಗಳನ್ನು ನಕಲಿ ವಿಡಿಯೊಗಳನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ಮಾದಕ ವಸ್ತು ಸಂತ್ರಸ್ತೆ ಎನ್ನಲಾದ ಮತ್ತೊಬ್ಬ ಬಾಲಕಿಯ ಧ್ವನಿಯನ್ನೂ ಬಳಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಪೋಕ್ಸೊ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ADVERTISEMENT

ಈ ಆರೋಪಗಳನ್ನು ತಳ್ಳಿಹಾಕಿರುವ ಸುದ್ದಿ ಸಂಸ್ಥೆಯ ಅಧಿಕಾರಿಗಳು, ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಿರುವುದಕ್ಕೆ ಪ್ರತಿಕಾರವಾಗಿ ಶಾಸಕರು ದೂರು ದಾಖಲಿಸಿದ್ದಾರೆ. ವಾಹಿನಿಯು ಶೀಘ್ರದಲ್ಲೇ ತೊಂದರೆಗೆ ಸಿಲುಕಲಿದೆ ಎಂದು ಅವರು ಮೊದಲೇ ಎಚ್ಚರಿಕೆ ನೀಡಿದ್ದರು ಎಂದು ಹೇಳಿದ್ದಾರೆ.

ಸುದ್ದಿ ವಾಹಿನಿಯು ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಿಧಾನಸಭೆಯಲ್ಲಿ ಲಿಖಿತ ಪ್ರತಿಕ್ರಿಯೆ ನೀಡಿದ್ದರು. ಇದಾದ ಬಳಿಕ ವಿವಾದ ಭುಗಿಲೆದ್ದಿದ್ದು, ಎಸ್‌ಎಫ್‌ಐ ಸಂಘಟನೆಯು ವಿದ್ಯಾರ್ಥಿ ಕಾರ್ಯಕರ್ತರೊಂದಿಗೆ ಕೊಚ್ಚಿಯಲ್ಲಿರುವ ಏಷ್ಯಾನೆಟ್‌ ಸುದ್ದಿ ವಾಹಿನಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಕಚೇರಿಗೆ ನುಗ್ಗಿ ಘೋಷಣೆಗಳನ್ನು ಕೂಗಿದ್ದರು. ಎಸ್‌ಎಫ್‌ಐ ಕಾರ್ಯಕರ್ತರ ನಡೆಗೆ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು. ಸಂಘಟನೆಯ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಕಲ್ಪಿತ ವಿಡಿಯೊ ಸೃಷ್ಟಿಸಲಾಗಿದೆ ಎಂಬ ಆರೋಪ ಇರುವ ಸುದ್ದಿ ಸಂಸ್ಥೆಯ ಕೊಯಿಕ್ಕೋಡ್‌ ಕಚೇರಿಗೆ ಭಾನುವಾರ ತೆರಳಿರುವ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.