ADVERTISEMENT

ದೆಹಲಿ: ಬೀದಿಗಿಳಿದ ಪೊಲೀಸರು

ಪಿಟಿಐ
Published 5 ನವೆಂಬರ್ 2019, 20:17 IST
Last Updated 5 ನವೆಂಬರ್ 2019, 20:17 IST
ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಪೊಲೀಸರು ಘೋಷಣೆ ಕೂಗಿ ಗಮನಸೆಳೆದರು
ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಪೊಲೀಸರು ಘೋಷಣೆ ಕೂಗಿ ಗಮನಸೆಳೆದರು   

ನವದೆಹಲಿ: ವಕೀಲರು ಹಲ್ಲೆ ನಡೆಸಿದ್ದನ್ನು ಖಂಡಿಸಿ ಸಾವಿರಾರು ಪೊಲೀಸ್‌ ಸಿಬ್ಬಂದಿ ಮಂಗಳವಾರ ಇಲ್ಲಿನ ಪೊಲೀಸ್‌ ಮುಖ್ಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ದೆಹಲಿ ಪೊಲೀಸ್‌ ಇಲಾಖೆಯ ಇತಿಹಾಸದಲ್ಲಿ ಪೊಲೀಸರು ಪ್ರತಿಭಟನೆ ನಡೆಸಿದ್ದು ಇದೇ ಮೊದಲು. ಹಿರಿಯ ಅಧಿಕಾರಿ ಸ್ಥಳಕ್ಕೆ ಬಂದು, ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದರೂ ಅದನ್ನು ಕಡೆಗಣಿಸಿದರು. ಸಂಜೆಯ ವೇಳೆಗೆ ಪೊಲೀಸರ ಕುಟುಂಬದವರು ಸಹ ಇಂಡಿಯಾ ಗೇಟ್‌ ಬಳಿ ಸೇರಿ ಪ್ರತಿಭಟನೆಯ ಕಾವನ್ನು ಹೆಚ್ಚಿಸಿದರು. ಸಂಜೆ ಪೊಲೀಸ್‌ ಮುಖ್ಯ ಕಚೇರಿಯ ಮುಂದೆ ಕ್ಯಾಂಡಲ್‌ಗಳನ್ನು ಹಿಡಿದು ಪೊಲೀಸರು ಪ್ರತಿಭಟನೆ ನಡೆಸಿದರು.

ರಾತ್ರಿ, ಹಿರಿಯ ಅಧಿಕಾರಿಗಳು ಬಂದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು. ಗಾಯಗೊಂಡಿರುವ ಸಿಬ್ಬಂದಿಗೆ ₹ 25,000 ಪರಿಹಾರ ನೀಡು ವು ದಾಗಿ ಅಧಿಕಾರಿ ಘೋಷಿಸಿದರು.

ADVERTISEMENT

ತೀಸ್‌ ಹಜಾರಿ ಕೋರ್ಟ್‌ ಆವರಣದಲ್ಲಿ ಶನಿವಾರ ಮತ್ತು ಸಾಕೇತ್‌ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಪೊಲೀಸರ ಮೇಲೆವಕೀಲರು ದಾಳಿ ನಡೆಸಿದ ಪ್ರತ್ಯೇಕ ಘಟನೆಗಳು ನಡೆದಿದ್ದವು. 20ಕ್ಕೂ ಹೆಚ್ಚು ಮಂದಿ ಪೊಲೀಸರು, ಕೆಲವು ವಕೀಲರು ಗಾಯಗೊಂಡಿದ್ದರು.

ಶನಿವಾರದ ಘಟನೆಗೆ ಸಂಬಂಧಿಸಿದಂತೆ ಯಾವುದೇ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಆದೇಶ ನೀಡಿತ್ತು.

ಶಾಗೆ ವರದಿ:ತೀಸ್‌ ಹಜಾರಿ ಕೋರ್ಟ್‌ ಆವರಣದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್‌ ಇಲಾಖೆ ಗೃಹಸಚಿವ ಅಮಿತ್‌ ಶಾ ಅವರಿಗೆ ಮಂಗಳವಾರ ವರದಿ ಸಲ್ಲಿಸಿದೆ.

‘ಶನಿವಾರ ನಡೆದ ಘಟನೆಯ ವಿವರ ಮತ್ತು ನಂತರ ಕೈಗೊಂಡ ಕ್ರಮಗಳ ವಿವರಗಳನ್ನು ಹೊಂದಿರುವ ವಾಸ್ತವ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಸೋಮವಾರ ನಡೆದ ಘಟನೆಯ ವಿವರ ವರದಿಯಲ್ಲಿಲ್ಲ’ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.