ADVERTISEMENT

ಭಾರತದಲ್ಲಿ ಕೊರೊನಾ ಸೋಂಕು: ಮುಂದಿನ ಮೂರು ದಿನಗಳು ಕಠಿಣ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 7:53 IST
Last Updated 8 ಏಪ್ರಿಲ್ 2020, 7:53 IST
ಭಾರತದಲ್ಲಿ ಕೊರೊನಾ
ಭಾರತದಲ್ಲಿ ಕೊರೊನಾ   

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಮೂರನೆ ಹಂತ ತಲುಪದಂತೆ ತಡೆಯುವಲ್ಲಿ ಲಾಕ್‌‌ಡೌನ್ ಯಶಸ್ವಿಯಾಗಿದೆ.
ಅಮೆರಿಕಾ ಹಾಗೂ ಯೂರೋಪ್‌‌ನಂತೆ ರೋಗ ಭಾರತದಲ್ಲಿ ಹರಡುತ್ತಿಲ್ಲವಾದರೂ ಮುಂದಿನ ಮೂರು ದಿನಗಳು ಕಠಿಣವಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಕಡಿಮೆ ಸೋಂಕು ತಗುಲಿದೆ ಎಂದು ಹೇಳುವ ಮೊದಲು ಇನ್ನೂ ಮೂರು ದಿನಗಳು ಕಾಯಬೇಕು. ನಿಜವಾದ ಪರೀಕ್ಷೆ ಇರುವುದು ಮುಂಬೈನ ಧಾರಾವಿಯಂತಹ ಕೊಳಗೇರಿಯಲ್ಲಿ. ಧಾರಾವಿಯಲ್ಲಿ ಸೋಂಕು ಉಲ್ಭಣಿಸುವುದೋ ಇಲ್ಲವೋ ನೋಡಬೇಕು.ಧಾರಾವಿ ಸ್ಫೋಟಗೊಳ್ಳದಿದ್ದರೆ ಆಗ ಕೊಳಗೇರಿಯಲ್ಲಿರುವ ಜನರು ಸ್ವಯಂ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ ಎಂಬುದು ಕೆಲಸ ಮಾಡಿದೆಎಂದು ತಿಳಿದುಕೊಳ್ಳಬಹುದು ಎಂದು ಸಿಎಸ್‌‌ಐಆರ್‌‌ನ ಮಾಜಿ ನಿರ್ದೇಶಕ ಸಮೀರ್ ಕೆ.ಬ್ರಹ್ಮಚಾರಿ ಅಭಿಪ್ರಾಯಪಟ್ಟಿದ್ದಾರೆ.

ಏಪ್ರಿಲ್ 14ಕ್ಕೆ ಮೂರು ವಾರಗಳ ಲಾಕ್‌ಡೌನ್ ಮುಗಿಯಲು ನಿಗದಿಪಡಿಸಲಾಗಿದೆ. ಈ ಸಮಯದಲ್ಲಿ ಲಾಕ್‌ಡೌನ್ ಮುಂದುವರಿಯುತ್ತದೆಯೋ ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ.ಭಾರತದ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಬೇರೆ ರಾಷ್ಟ್ರಗಳಷ್ಟು ಕೆಟ್ಟ ಪರಿಸ್ಥಿತಿ ಇಲ್ಲ ಎಂದುಬೆಂಗಳೂರಿನ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಮಾಜಿ ನಿರ್ದೇಶಕ ಎನ್.ದೇವದಾಸನ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಅಲ್ಲದೆ, ಭಾರತದಲ್ಲಿ ಬಿಸಿಯಾದ ಹವಾಮಾನ, ಭಾರತೀಯರಲ್ಲಿರುವ ರೋಗನಿರೋಧಕ ಶಕ್ತಿ, ವಿದೇಶದಿಂದ ಬಂದ ಭಾರತೀಯರು, ಅವರ ಸ್ನೇಹಿತರು ಕುಟುಂಬದವರನ್ನು ಕ್ವಾರಂಟೈನನಲ್ಲಿ ಇಟ್ಟಿದ್ದು ಕೂಡ ಸೋಂಕು ಹರಡುವುದನ್ನು ತಡೆಯುವಲ್ಲಿ ಸಹಕಾರಿಯಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ ಕೇಂದ್ರ ಸರ್ಕಾರ ಲಾಕ್‌ಡೌನ್ ವಿಸ್ತರಿಸುವ ಕುರಿತು ಚರ್ಚಿಸಲಾಗುತ್ತಿದೆ. ಲಾಕ್‌‌ಡೌನ್‌‌ನಿಂದ ಸಮುದಾಯಕ್ಕೆ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದಿರುವ ಸಂಶೋಧಕರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಲಾಕ್ ಡೌನ್‌‌‌ನಿಂದಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವ ಕೂಲಿಕಾರರ ಮೇಲೆ ಪರಿಣಾಮ ಬೀರಿದೆ. ಆದರೆ, ಸರ್ಕಾರ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳದಂತೆ ತಡೆಗಟ್ಟಬೇಕು. ಇಲ್ಲವೆ ಇದ್ದ ಸ್ಥಳದಲ್ಲಿಯೇಅವರಿಗೆ ವ್ಯವಸ್ಥೆ ಕಲ್ಪಿಸಬೇಕು. ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಸೋಂಕು ಹರಡುವುದನ್ನು ತಡೆಯುವಲ್ಲಿ ಲಾಕ್‌ಡೌನ್ ಯಶಸ್ವಿಯಾಗಿದೆ ಎಂದು ದೇವದಾಸನ್ ತಿಳಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಖಂಡಿತ ಕೆಲಸ ಮಾಡಿದೆ. ಇಲ್ಲದಿದ್ದಲ್ಲಿ ದಿನಕ್ಕೆ 2 ಸಾವಿರ ಮಂದಿಗೆ ಸೋಂಕು ತಗುಲುತ್ತಿತ್ತು ಎಂದು ಸಂಶೋಧಕ ಬ್ರಹ್ಮಚಾರಿ ಹೇಳುತ್ತಾರೆ. ವಿಶ್ವವಿದ್ಯಾಲಯವೊಂದರ ಇಬ್ಬರು ಸಂಶೋಧಕರ ಅಧ್ಯಯನದ ಪ್ರಕಾರ, ಲಾಕ್ ಡೌನ್ ಮತ್ತು ಸಾಮಾಜಿಕ ಅಂತರದಿಂದಾಗಿ ಸಾವಿನ ಪ್ರಮಾಣ, ಸೋಂಕಿತ ರೋಗಿಗಳ ಸಂಖ್ಯೆಯಲ್ಲಿ ಕಡಿಮೆಯಾಗುವಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ ಎಂದು ಶಿವನಾಡರ್ ವಿಶ್ವವಿದ್ಯಾಲಯದ ಸಂಶೋಧಕ ಸಮಿತ್ ಭಟ್ಟಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.