ADVERTISEMENT

ರಾಷ್ಟ್ರಪತಿ ಭವನದ ಸಿಬ್ಬಂದಿ ಸಂಬಂಧಿಗೆ ಕೋವಿಡ್‌–19 ದೃಢ

ಆತಂಕದ ವಾತಾವರಣ ಸೃಷ್ಟಿ: 115 ಕುಟುಂಬಗಳಿಗೆ ಕ್ವಾರಂಟೈನ್‌

ಪಿಟಿಐ
Published 22 ಏಪ್ರಿಲ್ 2020, 1:04 IST
Last Updated 22 ಏಪ್ರಿಲ್ 2020, 1:04 IST
ರಾಷ್ಟ್ರಪತಿ ಭವನದ ಎದುರು ರಸ್ತೆ ದಾಟುತ್ತಿರುವ ಸಿಬ್ಬಂದಿ
ರಾಷ್ಟ್ರಪತಿ ಭವನದ ಎದುರು ರಸ್ತೆ ದಾಟುತ್ತಿರುವ ಸಿಬ್ಬಂದಿ   

ನವದೆಹಲಿ: ರಾಷ್ಟ್ರಪತಿ ಭವನದ ಸ್ವಚ್ಛತಾ ಸಿಬ್ಬಂದಿಯೊಬ್ಬರ ಸಂಬಂಧಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವುದರಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ 115 ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಏಪ್ರಿಲ್ 13ರಂದು ನವದೆಹಲಿಯ ಬಿ.ಎಲ್. ಕಪೂರ್ ಆಸ್ಪತ್ರೆಯಲ್ಲಿ ನಿಧನರಾದ ಕೋವಿಡ್‌–19 ರೋಗಿಯು ರಾಷ್ಟ್ರಪತಿ ಕಾರ್ಯಾಲಯದ ಉದ್ಯೋಗಿಯಾಗಲಿ, ರಾಷ್ಟ್ರಪತಿ ಎಸ್ಟೇಟ್‌ನ ನಿವಾಸಿಯಾಗಲಿ ಅಲ್ಲ. ಆದರೆ,ರಾಷ್ಟ್ರಪತಿ ಕಾರ್ಯಾಲಯದ ಉದ್ಯೋಗಿಯೊಬ್ಬರ ಕುಟುಂಬದ ಸದಸ್ಯರು ಮೃತ ರೋಗಿಯ ಸಂಪರ್ಕಕ್ಕೆ ಬಂದಿದ್ದರು ಎಂಬುದು ತಿಳಿದು ಬಂದಿದೆ.

‘ರಾಷ್ಟ್ರಪತಿ ಭವನದ ಯಾವುದೇ ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿಲ್ಲ’ಎಂದುರಾಷ್ಟ್ರಪತಿ ಭವನದ ಪ್ರಕಟಣೆಯು ಸ್ಪಷ್ಟಪಡಿಸಿದೆ.

ADVERTISEMENT

‘ಬಳಿಕ ನಡೆಸಲಾದ ರೋಗಿಯ ಸಂಪರ್ಕಕ್ಕೆ ಬಂದಿದ್ದವರ ಟ್ರೇಸಿಂಗ್‌ನಲ್ಲಿ ಈ ಉದ್ಯೋಗಿಯು ತಮ್ಮ ಕುಟುಂಬದ ಸದಸ್ಯರೊಂದಿಗೆ ರಾಷ್ಟ್ರಪತಿ ಭವನದ ಆವರಣದಲ್ಲಿನ ಸಿಬ್ಬಂದಿ ವಸತಿಗೃಹದಲ್ಲಿ ನೆಲೆಸಿದ್ದರು. ಏಪ್ರಿಲ್ 16ರಂದೇ ಪಾಕೆಟ್‌–1 ಶೆಡ್ಯೂಲ್–ಎ ಪ್ರದೇಶದ ನಿವಾಸಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ’ ಎಂದು ಪ್ರಕಟಣೆ ವಿವರಿಸಿದೆ.

‘ಇದಾದ ಬೆನ್ನಲ್ಲೆ, ರೋಗಿಯ ಸಂಪರ್ಕದಲ್ಲಿದ್ದ ಕುಟುಂಬದ ಸದಸ್ಯರೊಬ್ಬರನ್ನು ಪರೀಕ್ಷೆಗೊಳಿಸಿದಾಗ ಅವರಿಗೆ ಕೋವಿಡ್‌–19 ಪಾಸಿಟಿವ್ ಇರುವುದು ತಿಳಿಯಿತು. ರಾಷ್ಟ್ರಪತಿ ಕಾರ್ಯಾಲಯದ ಉದ್ಯೋಗಿಯ ಕುಟುಂಬದ ಎಲ್ಲಾ ಸದಸ್ಯರನ್ನೂ ಪರೀಕ್ಷೆಗೊಳಪಡಿಸಿದಾಗ ಅವರ ಫಲಿತಾಂಶ ನೆಗೆಟಿವ್ ಎಂದು ಬಂದಿದೆ’ ಎಂದು ಪ್ರಕಟಣೆ ಹೇಳಿದೆ.

‘ಆದರೂ, ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ನೀಡಲಾದ ಮಾರ್ಗಸೂಚಿಗಳ ಪ್ರಕಾರ, ರಾಷ್ಟ್ರಪತಿ ಎಸ್ಟೇಟ್ ಆವರಣದಲ್ಲಿನ 115 ಕುಟುಂಬಗಳಿಗೆ ಮನೆಯಲ್ಲೇ ಇರುವಂತೆ ನಿರ್ಬಂಧ ವಿಧಿಸಲಾಗಿದೆ. ಈ ಕುಟುಂಬಗಳಿಗೆ ಅಗತ್ಯವಿರುವ ಸಾಮಾನುಗಳನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ರಾಷ್ಟ್ರಪತಿ ಭವನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.