ADVERTISEMENT

ಹುಟ್ಟಿದ ಇಬ್ಬರು ಮಕ್ಕಳಿಗೆ ಕೊರೊನಾ, ಲಾಕ್‌ಡೌನ್‌ ಎಂದು ನಾಮಕರಣ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 6:38 IST
Last Updated 2 ಏಪ್ರಿಲ್ 2020, 6:38 IST
   

ಲಕ್ನೋ: ಮಾರಣಾಂತಿಕ ಕೊರೊನಾ ಸೋಂಕಿಗೆ ಜಗತ್ತು ತಲ್ಲಣಿಸುತ್ತಿರುವುದರ ನಡುವೆಯೇ ಉತ್ತರ ಪ್ರದೇಶದಲ್ಲಿ ಹೊಸದಾಗಿ ಹುಟ್ಟಿದ ಇಬ್ಬರು ಹಸುಳೆಗಳಿಗೆ 'ಕೊರೊನಾ' ಮತ್ತು 'ಲಾಕ್‌ಡೌನ್‌' ಎಂದು ನಾಮಕರಣ ಮಾಡಲಾಗಿದೆ.

ಈ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಇಬ್ಬರು ಮಕ್ಕಳಿಗೆ ಸಂಬಂಧಿಸಿದ ಎರಡೂ ಕುಟುಂಬಗಳು ಕೊರೊನಾ ಬಗ್ಗೆ ಜನರು ಜಾಗೃತರಾಗಲಿ ಎನ್ನುವ ಆಶಯ ಹೊಂದಿವೆ.

ದೇಶದಲ್ಲಿ ಜನತಾ ಕರ್ಫ್ಯೂ ಇದ್ದ ದಿನ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಕೊರೊನಾ ಎಂದು ಹೆಸರಿಡಲಾಗಿದೆ.

ADVERTISEMENT

ಇದಾದ ಒಂದು ವಾರ ನಂತರ ದಿಯೋರಿಯಾ ಜಿಲ್ಲೆಯಲ್ಲಿ ಹುಟ್ಟಿದ ಗಂಡು ಮಗುವಿಗೆ ಲಾಕ್‌ಡೌನ್‌ ಎಂದು ನಾಮಕರಣ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ದಿಯೋರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆರ್‌.ಪಿ. ತ್ರಿಪಾಠಿ, 'ಭಾನುವಾರ ಸಂಜೆ ಜನಿಸಿದ ಮಗುವಿಗೆ ಲಾಕ್‌ಡೌನ್‌ ಎಂದು ಹೆಸರಿಡಲಾಯಿತು. ನಾವೆಲ್ಲರೂ ಲಾಕ್‌ಡೌನ್‌ ಪಾಲಿಸುವುದು ಅನಿವಾರ್ಯ' ಎಂದು ತಿಳಿಸಿದ್ದಾರೆ.
ಮಗುವನ್ನು ಬುಧವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ದಿಯೋರಾ ಜಿಲ್ಲೆಯ ಗ್ರಾಮವೊಂದರ ನಿವಾಸಿಗಳಾದ ನೀರಜಾ ದೇವಿ ಮತ್ತು ಪವನ್‌ ಪ್ರಸಾದ್‌ ಅವರಿಗೆ ಈ ಗಂಡು ಮಗು ಜನಿಸಿದೆ.

ಈ ಬಗ್ಗೆ ಮಾತನಾಡಿರುವ ಮಗುವಿನ ತಂದೆ ಪವನ್‌ ಪ್ರಸಾದ್, 'ಜನರು ಕೋವಿಡ್‌-19 ವಿಚಾರವಾಗಿ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ನನ್ನ ಮಗು ನೆನಪಿಸಲಿದೆ' ಎಂದು ಹೇಳಿದ್ದಾರೆ.

ಜನತಾ ಕರ್ಫ್ಯೂ ದಿನದಂದು ಗೋರಖ್‌ಪುರದ ಸೊಹಗೌರಾ ಗ್ರಾಮದಲ್ಲಿ ಬಬ್ಲು ತ್ರಿಪಾಠಿ ಮತ್ತು ರಾಗಿಣಿ ತ್ರಿಪಾಠಿ ದಂಪತಿಗಳಿಗೆ ಹೆಣ್ಣು ಮಗು ಜನಿಸಿತು.

ಮಗುವಿನ ಚಿಕ್ಕಪ್ಪ ನಿತೇಶ್‌ ತ್ರಿಪಾಠಿ ಆಗ ತಾನೇ ಜನಿಸಿದ ಹಸುಳೆಗೆ ಕೊರೊನಾ ಎಂದು ಹೆಸರಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಗುವಿನ ಚಿಕ್ಕಪ್ಪ, 'ನಾನು ನನ್ನ ಅತ್ತಿಗೆ (ಮಗುವಿನ ತಾಯಿ)ಯಿಂದ ಅನುಮತಿ ಪಡೆದು, ಮಗುವಿಗೆ ಕೊರೊನಾ ಎಂದು ನಾಮಕರಣ ಮಾಡಿದೆ. ಕಾರಣ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನರು ಒಂದುಗೂಡಿದ್ದಾರೆ. ದೇಶದ ಏಕತೆಯ ಸಂಕೇತವಾಗಿ ಮಗುವಿಗೆ ಕೊರೊನಾ ಹೆಸರಿಟ್ಟೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.