ADVERTISEMENT

ಭಾರತದ ಡೆಲ್ಟಾ ತಳಿ: ಫೈಝರ್ ಲಸಿಕೆ ಪರಿಣಾಮ ಕಡಿಮೆ

ಡೋಸ್‌ ಅಂತರ ಹೆಚ್ಚಿದಷ್ಟೂ ಪ್ರತಿಕಾಯ ಸೃಷ್ಟಿ ಕಡಿಮೆ: ಅಧ್ಯಯನ ವರದಿ

ಪಿಟಿಐ
Published 4 ಜೂನ್ 2021, 19:32 IST
Last Updated 4 ಜೂನ್ 2021, 19:32 IST
ಫೈಜರ್ ಕೋವಿಡ್ ಲಸಿಕೆ
ಫೈಜರ್ ಕೋವಿಡ್ ಲಸಿಕೆ   

ನವದೆಹಲಿ: ಭಾರತದಲ್ಲಿ ಕೋವಿಡ್‌ನ ಎರಡನೇ ಅಲೆಯು ತೀವ್ರಗೊಳ್ಳಲು ಕಾರಣವಾಗಿರುವ ಬಿ.1.617.2 ತಳಿಯ ಕೊರೊನಾವೈರಸ್ ಅಥವಾ ಡೆಲ್ಟಾ ಅವತರಣಿಕೆಯ ವಿರುದ್ಧ ಫೈಝರ್ ಕಂಪನಿಯ ಕೋವಿಡ್‌ ಲಸಿಕೆಯ ಪರಿಣಾಮ ಕಡಿಮೆ. ಎರಡು ಡೋಸ್‌ಗಳ ಮಧ್ಯೆ ಅಂತರ ಹೆಚ್ಚಿದಷ್ಟೂ ಲಸಿಕೆಯ ಪರಿಣಾಮ ಮತ್ತಷ್ಟು ಕಡಿಮೆಯಾಗುತ್ತದೆ ಎಂದು ನೂತನ ಅಧ್ಯಯನ ವರದಿಯೊಂದು ಹೇಳಿದೆ.

‘ಮೂಲ ಕೊರೊನಾ ವೈರಾಣುವಿಗಿಂತಲೂ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದ್ದ ಬಿ.1.1.7 ತಳಿಯು ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿತ್ತು. ಈ ತಳಿಯನ್ನು ಆಲ್ಫಾ ತಳಿ ಎಂದು ಕರೆಯಲಾಗಿತ್ತು. ಈಗ ಡೆಲ್ಟಾ ತಳಿಯು, ಆಲ್ಫಾ ತಳಿಗಿಂತ ಶೇ 50ರಷ್ಟು ವೇಗವಾಗಿ ಹರಡುತ್ತದೆ ಎಂಬುದು ಗೊತ್ತಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಫೈಝರ್ ಕಂಪನಿಯ ಕೋವಿಡ್‌ ಲಸಿಕೆಯ ಪರಿಣಾಮವು, ಡೆಲ್ಟಾ ತಳಿಯ ವಿರುದ್ಧ ಅತ್ಯಂತ ಕಡಿಮೆ’ ಎಂದು ಲ್ಯಾನ್ಸೆಟ್‌ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ವಿವರಿಸಲಾಗಿದೆ.

ಮೂಲ ಕೊರೊನಾ ವೈರಾಣುವಿನ ವಿರುದ್ಧ ಪೈಝರ್ ಲಸಿಕೆಯ ಪರಿಣಾಮ ಶೇ 79ರಷ್ಟು ಇತ್ತು. ಬ್ರಿಟನ್‌ನಲ್ಲಿ ಪತ್ತೆಯಾದ ಆಲ್ಫಾ ತಳಿಯ ವಿರುದ್ಧ ಪರಿಣಾಮ ಪ್ರಮಾಣ ಶೇ 50ಕ್ಕೆ ಕುಸಿದಿತ್ತು. ಭಾರತದಲ್ಲಿ ಪತ್ತೆಯಾಗಿರುವ ಡೆಲ್ಟಾ ತಳಿಯ ವಿರುದ್ಧ ಈ ಪ್ರಮಾಣವು ಶೇ 32ರಷ್ಟು ಮತ್ತು ಆಫ್ರಿಕಾದಲ್ಲಿ ಪತ್ತೆಯಾದ ಬೀಟಾ ತಳಿಯ ವಿರುದ್ಧ ಈ ಲಸಿಕೆಯ ಪರಿಣಾಮ ಶೇ 25ರಷ್ಟು ಮಾತ್ರ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘ಜನರಿಗೆ ಈ ಸೋಂಕು ತಗುಲುವುದು ಮತ್ತು ಅವರು ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯಲು ಇರುವ ಏಕೈಕ ಮಾರ್ಗ ಲಸಿಕೆ. ಹೀಗಾಗಿ ಎಲ್ಲರಿಗೂ ಲಸಿಕೆ ಹಾಕಬೇಕು. ಆದರೆ ಈಗಾಗಲೇ ಮೊದಲ ಡೋಸ್‌ ಲಸಿಕೆ ಪಡೆದುಕೊಂಡಿರುವವರಿಗೆ ಶೀಘ್ರದಲ್ಲೇ ಎರಡನೇ ಡೋಸ್‌ ನೀಡಬೇಕು. ಇಲ್ಲದಿದ್ದಲ್ಲಿ ಈ ತಳಿಯ ವಿರುದ್ಧ ಹೋರಾಡುವಷ್ಟು ಪ್ರತಿಕಾಯಗಳು ಅಭಿವೃದ್ಧಿಯಾಗುವುದಿಲ್ಲ’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಲಸಿಕೆ ಅಂತರ: ಬ್ರಿಟನ್ ಅನುಸರಿಸಿದ್ದ ಭಾರತ

ಭಾರತದಲ್ಲಿ ಈಗ ಕೋವಿಡ್‌ ವಿರುದ್ಧ ಈಗ ಪ್ರಧಾನವಾಗಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಈಚೆಗಷ್ಟೇ ಕೇಂದ್ರ ಸರ್ಕಾರವು ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಣ ಅಂತರವನ್ನು 12-16ಕ್ಕೆ ವಿಸ್ತರಿಸಿದೆ.

'ಬ್ರಿಟನ್‌ನಲ್ಲಿ ನಡೆದ ಅಧ್ಯಯನದ ಪ್ರಕಾರ ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಣ ಅಂತರ 12 ವಾರಕ್ಕೂ ಹೆಚ್ಚು ಇದ್ದಾಗ ವೈರಾಣುವಿನ ವಿರುದ್ಧ ಲಸಿಕೆಯ ಪರಿಣಾಮಕತ್ವ ಶೇ 81.3ರಷ್ಟಾಗುತ್ತದೆ. ಎರಡು ಡೋಸ್‌ಗಳ ನಡುವಣ ಅಂತರ ಆರು ವಾರಗಳಿದ್ದಾಗ ಪರಿಣಾಮಕತ್ವದ ಪ್ರಮಾಣ ಶೇ 55.1ರಷ್ಟು ಮಾತ್ರ. ಹೀಗಾಗಿ ಎರಡು ಡೋಸ್‌ಗಳ ನಡುವಣ ಅಂತರವನ್ನು ವಿಸ್ತರಿಸಲಾಗಿದೆ' ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಬ್ರಿಟನ್‌ನಲ್ಲಿ ಡೆಲ್ಟಾ ತಳಿಯ ಮೇಲೆ ಅಧ್ಯಯನ ನಡೆಸಿಲ್ಲ. ಮೂಲ ಕೊರೊನಾವೈರಾಣು ಮತ್ತು ಆಲ್ಫಾ ತಳಿಯ ಮೇಲೆ ನಡೆಸಿದ ಅಧ್ಯಯನದ ಆಧಾರದ ಮೇಲೆ ಬ್ರಿಟನ್‌ ಸರ್ಕಾರವು ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಣ ಅಂತರವನ್ನು 12 ವಾರಗಳಿಗೆ ವಿಸ್ತರಿಸಿತ್ತು. ಆದರೆ, ಭಾರತದಲ್ಲಿ ಈಗ ಡೆಲ್ಟಾ ತಳಿ ತೀವ್ರವಾಗಿದೆ. ಬ್ರಿಟನ್‌ನಲ್ಲೂ ಈಗ ಡೆಲ್ಟಾ ತಳಿಯು ಕ್ಷಿಪ್ರವಾಗಿ ಹರಡುತ್ತಿರುವ ಕಾರಣ ಎರಡು ಡೋಸ್‌ಗಳ ನಡುವಣ ಅಂತರವನ್ನು ಕಡಿಮೆ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.