ನವದೆಹಲಿ: ಕೊರೊನಾ ವೈರಸ್‌ನ ಹೊಸ ತಳಿಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿದ್ದ ವೈಜ್ಞಾನಿಕ ಸಲಹೆಗಾರರ ಸಮಿತಿಗೆ ಖ್ಯಾತ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ.
ಇಂಡಿಯನ್ ಸಾರ್ಸ್-ಕೋವಿಡ್-2 ಜಿನೊಮಿಕ್ಸ್ ಕನ್ಸೊರ್ಟಿಯಂನ(ಐಎನ್‌ಎಸ್‌ಎಸಿಒಜಿ) ವೈಜ್ಞಾನಿಕ ಸಲಹೆಗಾರರ ಸಮಿತಿಯ ಅಧ್ಯಕ್ಷರಾಗಿದ್ದ ಜಮೀಲ್ ಅವರ ರಾಜೀನಾಮೆಗೆ ಕಾರಣಗಳು ಬಹಿರಂಗಗೊಂಡಿಲ್ಲ.
'ರಾಜೀನಾಮೆಗೆ ಕಾರಣವನ್ನು ನೀಡಲು ನನಗೆ ಯಾವುದೇ ನಿರ್ಬಂಧಗಳಿಲ್ಲ' ಎಂದು ಜಮೀಲ್ ಅವರು ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.
ಐಎನ್‌ಎಸ್‌ಎಸಿಒಜಿ ಮೇಲ್ವಿಚಾರಣೆ ಹೊತ್ತಿರುವ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣುಸ್ವರೂಪ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಹ ಜಮೀಲ್ ಅವರ ರಾಜೀನಾಮೆಯ ವಿಚಾರವಾಗಿ ಮೌನ ತಾಳಿದ್ದಾರೆಂದು ರಾಯಿಟರ್ಸ್ ಹೇಳಿದೆ.
ಜಮೀಲ್ ಮತ್ತು ಕೇಂದ್ರ ಸರ್ಕಾರದ ನಡುವೆ ನೇರ ಭಿನ್ನಾಭಿಪ್ರಾಯಗಳು ಇದ್ದುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಐಎನ್‌ಎಸ್‌ಎಸಿಒಜಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಜಮೀಲ್ ರಾಜೀನಾಮೆಯ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
'ಭಾರತದ ಅತ್ಯುತ್ತಮ ವೈರಾಣು ತಜ್ಞರಲ್ಲಿ ಒಬ್ಬರಾದ ಡಾ. ಶಾಹಿದ್ ಜಮೀಲ್ ಅವರ ರಾಜೀನಾಮೆ ನಿಜವಾಗಿಯೂ ಖೇದಕರ ವಿಚಾರವಾಗಿದೆ. ಯಾವುದೇ ಆತಂಕವಿಲ್ಲದೇ ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮುಕ್ತವಾಗಿ ಮಾತನಾಡಬಲ್ಲ ವೃತ್ತಿಪರರಿಗೆ ಮೋದಿ ಸರ್ಕಾರದಲ್ಲಿ ಜಾಗವಿಲ್ಲ' ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.