ಬೆಂಗಳೂರು: ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ದೇಶದಾದ್ಯಂತ ಎರಡನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು, ಏಪ್ರಿಲ್ 20ರ ಬಳಿಕ ಹಲವು ಸಡಿಕೆಗಳನ್ನು ಸರ್ಕಾರ ಪ್ರಕಟಿಸಿದೆ. ಆದರೆ, ಕೋವಿಡ್–19 ದೃಢಪಟ್ಟ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಗುರುವಾರ ಬೆಳಿಗ್ಗೆ 8ರ ವರೆಗೂ ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳು 12,380ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 941 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿಗೆ 37 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 414 ಮುಟ್ಟಿದೆ.
ಒಟ್ಟು 12,380 ಕೋವಿಡ್–19 ಪ್ರಕರಣಗಳ ಪೈಕಿ 1,488 ಜನ ಗುಣಮುಖರಾಗಿದ್ದು, ವಿವಿಧ ರಾಜ್ಯಗಳಲ್ಲಿ 10,477 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 2,916 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಈಗಾಗಲೇ 187 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಇನ್ನೂ ದೆಹಲಿಯಲ್ಲಿ ಒಟ್ಟು 1,578 ಪ್ರಕರಣಗಳು, 32 ಮಂದಿ ಸಾವು; ತಮಿಳುನಾಡಿನಲ್ಲಿ 1,242 ಪ್ರಕರಣಗಳು, 14 ಮಂದಿ ಸಾವು; ರಾಜಸ್ಥಾನದಲ್ಲಿ 1,023 ಪ್ರಕರಣಗಳು, 3 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ 279 ಸೋಂಕು ಪ್ರಕರಣಗಳು ದಾಖಲಾಗಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ 987 ಸೋಂಕು ಪ್ರಕರಣಗಳ ಪೈಕಿ 53 ಮಂದಿ ಬಲಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.