ADVERTISEMENT

ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್‌ 30ರ ವರೆಗೂ ಲಾಕ್‌ಡೌನ್‌ ವಿಸ್ತರಣೆ

ಏಜೆನ್ಸೀಸ್
Published 11 ಏಪ್ರಿಲ್ 2020, 12:28 IST
Last Updated 11 ಏಪ್ರಿಲ್ 2020, 12:28 IST
ಮುಂಬೈ ನಗರದ ರಸ್ತೆಗಳಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು
ಮುಂಬೈ ನಗರದ ರಸ್ತೆಗಳಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು    

ಮುಂಬೈ: ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಏಪ್ರಿಲ್‌ 14ರ ವರೆಗೂ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು, ಏಪ್ರಿಲ್‌ 30ರ ವರೆಗೂ ನಿರ್ಬಂಧ ಮುಂದುವರಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶನಿವಾರ ಹೇಳಿದ್ದಾರೆ.

ಒಡಿಶಾ, ಪಂಜಾಬ್ ನಂತರ ಮಹಾರಾಷ್ಟ್ರ ಲಾಕ್‌ಡೌನ್‌ ವಿಸ್ತರಣೆ ಘೋಷಿಸಿದೆ. 'ಮಹಾರಾಷ್ಟ್ರದಲ್ಲಿ ಮೊದಲ ಕೋವಿಡ್‌–19 ಪ್ರಕರಣ ವರದಿಯಾಗಿ ಮುಂದಿನ ಸೋಮವಾರಕ್ಕೆ 5 ವಾರಗಳಾಗಲಿವೆ. ಈವರೆಗೂ ಸೋಂಕು ಪ್ರಕರಣಗಳು ದುಪ್ಪಟ್ಟಾಗದಂತೆ ನಡೆಯುವಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಸಾಧಿಸಿದ್ದೇವೆ. ಏಪ್ರಿಲ್‌ 30ರ ವರೆಗೂ ಲಾಕ್‌ಡೌನ್‌ ವಿಸ್ತರಣೆಯಾಗಲಿದೆ' ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

'ಕೆಲವು ಭಾಗಗಳಲ್ಲಿ ಸಡಿಲಿಕೆ ನೀಡಬಹುದಾಗಿದೆ. ಆ ಕುರಿತು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ. ಅದೆಲ್ಲವೂ ಲಾಕ್‌ಡೌನ್‌ ವೇಳೆ ಜನರು ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ದಿನಸಿ ಖರೀದಿಸುವಾಗ ಗುಂಪುಗೂಡಬೇಡಿ ಹಾಗೂ ಯಾರಿಗೆಲ್ಲ ಸಾಧ್ಯವೋ ಅವರೆಲ್ಲರೂ ಮನೆಯಿಂದಲೇ ಕಾರ್ಯನಿರ್ವಹಿಸಿ' ಎಂದು ಸಲಹೆ ನೀಡಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಲಾಕ್‌ಡೌನ್‌ ವಿಸ್ತರಣೆ ಕುರಿತು ಮಾಹಿತಿ ನೀಡಿದ್ದಾರೆ.

'ಆರು ಹೊಸ ಪ್ರಕರಣಗಳು ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ 95 ಕೊರೊನಾ ವೈರಸ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಕರಿಗಳು ತೆರೆಯಲು ಅವಕಾಶ ನೀಡಲಾಗುತ್ತಿದ್ದು, ನಿಯಮಗಳ ಉಲ್ಲಂಘನೆಯಾಗದಂತೆ ಪಾಲಿಸಬೇಕಾಗುತ್ತದೆ. ಜೂನ್‌ 10ರ ವರೆಗೂ ಶಾಲೆಗಳು ತೆರೆಯುವುದಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.