ADVERTISEMENT

ಸಂಸದರ ವೇತನ ಶೇ. 30 ರಷ್ಟು ಕಡಿತ, ರಾಷ್ಟ್ರ ನಿರ್ಮಾಣಕ್ಕೆ ಹಣ ಬಳಕೆ: ಜಾವಡೇಕರ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 12:54 IST
Last Updated 6 ಏಪ್ರಿಲ್ 2020, 12:54 IST
   

ನವದೆಹಲಿ: ಸಂಸದರ ಪಿಂಚಣಿ ಮತ್ತು ಭತ್ಯೆಯನ್ನು ಶೇ 30 ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ವೇತನ ಕಡಿತಗೊಳಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ತಿಳಿಸಿದ್ದಾರೆ.

ಸಂಸತ್‌ ಸದಸ್ಯರ ತಿದ್ದುಪಡಿ ಕಾಯ್ದೆ–1954 ರ ಅಡಿಯಲ್ಲಿ ಜಾರಿ ಮಾಡಲಾಗಿರುವ ಈ ಸುಗ್ರೀವಾಜ್ಞೆ, ಏಪ್ರಿಲ್ 1, 2020 ರಿಂದಲೇ ಜಾರಿಗೆ ಬರಲಿದೆ. ವೇತನ ಕಡಿತವು ಒಂದು ವರ್ಷದವರೆಗೆ ಅನ್ವಯವಾಗಲಿದೆ.

‘ಸಂಸದರ ವೇತನ ಕಡಿತಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ಸುಗ್ರೀವಾಜ್ಞೆಯ ಹೊರತಾಗಿಯೂ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿಮತ್ತು ಹಲವು ರಾಜ್ಯಗಳ ರಾಜ್ಯಪಾಲರು, ಲೆಫ್ಟಿನೆಂಟ್‌ ಗವರ್ನರ್‌ಗಳೂ ಸ್ವಯಂಪ್ರೇರಣೆಯಿಂದ ವೇತನ ಕಡಿತಗೊಳಿಸಿಕೊಳ್ಳಲು ನಿರ್ಧಿರಿಸಿದ್ದಾರೆ’ ಎಂದು ಜಾವಡೇಕರ್ ಹೇಳಿದ್ದಾರೆ.

ADVERTISEMENT

ಈ ಹಣವನ್ನುಕನ್ಸಾಲಿಡೇಟೆಡ್‌ ಫಂಡ್ಗೆ (ಸಂಚಿತ ನಿಧಿ)ಸೇರಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಕನ್ಸಾಲಿಡೇಟೆಡ್‌ ಫಂಡ್ ಆಫ್‌ ಇಂಡಿಯಾ ಎಂದರೆ, ಸರ್ಕಾರವು ಖರ್ಚು, ಸಾಲ ಮತ್ತು ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಒಟ್ಟು ಆದಾಯವಾಗಿದೆ.

ಸಂಸದರ ಪ್ರದೇಶ ಅಭಿವೃದ್ಧಿ ಯೋಜನೆಗೆ ನೀಡುವ ನಿಧಿಯನ್ನು 2022ರ ವರೆಗೆ ತಡೆಹಿಡಿಯಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ‘ಪ್ರತಿಯೊಬ್ಬ ಸಂಸದರ ನಿಧಿಗೆ ನೀಡಬೇಕಿದ್ದ ತಲಾ₹ 10 ಕೋಟಿ ಹಣವನ್ನು ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು’ ಎಂದು ಎಂದಿದ್ದಾರೆ.

2020-21 ಮತ್ತು 2021-22ರ ಅವಧಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿಗೆ ನೀಡಬೇಕಿದ್ದ ನಿಧಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದರಿಂದ ₹ 7,900 ಕೋಟಿ ಕನ್ಸಾಲಿಡೇಟೆಡ್‌ ಫಂಡ್ಗೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.